ಹೊಸದಿಲ್ಲಿ, ಎ.11: ಕಡಲ ತೀರದ 50 ಮೀ. ವಲಯದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಗಳು 1994ರಿಂದ 96ರ ವರೆಗೆ ನಡೆಸಿರುವ ನಿರ್ಮಾಣ ಕಾಮಗಾರಿಗಳು ಕಾನೂನು ಬಾಹಿರವಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕರಾವಳಿ ನಿಯಂತ್ರಣ ವಲಯ ಕಾಯ್ದೆ-1991ಕ್ಕೆ ಸರಕಾರವು 1994ರಲ್ಲಿ ತಿದ್ದುಪಡಿಯೊಂದನ್ನು ತಂದು 100 ಮೀಟರ್ ಇದ್ದ ‘ಅಭಿವೃದ್ಧಿ ರಹಿತ ಪ್ರದೇಶ’ವನ್ನು 50 ಮೀಟರ್‌ಗೆ ಇಳಿಸಿದ ಬಳಿಕ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿತ್ತು.
ಆದಾಗ್ಯೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಆಧಾರದಲ್ಲಿ ಸುಪ್ರೀಂ ಕೋರ್ಟ್ 1996ರಲ್ಲಿ ಈ ತಿದ್ದುಪಡಿಯನ್ನು ರದ್ದುಗೊಳಿಸಿತ್ತು.ಆದರೆ, ಈ ತೀರ್ಪಿಗೂ ಮೊದಲೇ ಪರವಾನಿಗೆ ಪಡೆದಿದ್ದ ನಿರ್ಮಾಣ ಕಾಮಗಾರಿಯೊಂದನ್ನು ಮುಂದುವರಿಸುವುದನ್ನು ಗೋವಾ ಸರಕಾರ ತಡೆದುದನ್ನು ಪ್ರಶ್ನಿಸಿ ರಾಜ್ಯದ ನಿರ್ಮಾಣ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ನ ಕದ ತಟ್ಟಿತ್ತು. ಅದರ ಅರ್ಜಿಯನ್ನು ಮಾನ್ಯ ಮಾಡಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಜೆ.ಎಂ. ಪಂಚಾಲ್ ರನ್ನೊಳಗೊಂಡ ಪೀಠವೊಂದು ಸುಪ್ರೀಂ ಕೋರ್ಟ್ ತಿದ್ದುಪಡಿಯನ್ನು ರದ್ದುಗೊಳಿಸುವ ಮೊದಲು ಆರಂಭಿಸಿರುವ ನಿರ್ಮಾಣ ಕಾಮಗಾರಿ ಯನ್ನು ಕಾನೂನು ಬಾಹಿರ ಎನ್ನುವಂತಿಲ್ಲವೆಂದು ತೀರ್ಪು ನೀಡಿದೆ.