ಬೆಂಗಳೂರು,ಫೆ,13:ರಾಜ್ಯದಲ್ಲಿನ ಅಶಾಂತಿ ಹಾಗೂ ಗೊಂದಲ ಪರಿಸ್ಧಿತಿಗಳಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಬಿಜೆಪಿ ಇಂದಿಲ್ಲಿ ಆರೋಪಿಸಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಿಜೆಪಿ ವಕ್ತಾರರಾದ ಧನಂಜಯ ಕುಮಾರ್, ಸಿ.ಟಿ. ರವಿ, ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಅಸ್ಧಿರಗೊಳಿಸಲು ವಿಪಕ್ಷಗಳು ಅಡ್ಡದಾರಿ ಹಿಡಿದು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿವೆ ಎಂದು ದೂರಿದರು.
ರಾಜ್ಯದಲ್ಲಿ ನಡೆದಿರುವ ಗಲಭೆಯ ಹಿಂದೆ ರಾಜಕಾರಣದ ಹಿತಾಸಕ್ತಿ ಅಡಗಿದೆ. ವಿಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಮಸಿ ಬಳಿದಿರುವ ಪ್ರಕರಣವನ್ನು ಖಂಡಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕು. ಪ್ರಮೋದ್ ಮುತಾಲಿಕ್ ಮಸಿ ಪ್ರಕರಣ ಕಾಂಗ್ರೆಸ್ ಪಕ್ಷದ ಆಂತರಿಕ ಗುಂಪುಗಾರಿಕೆಗೆ ಉದಾಹರಣೆಯಾಗಿದೆ ಎಂದರು.
ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಇಲ್ಲ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಹೇಳಿದ್ದರೆ ಯುವ ಕಾಂಗ್ರೆಸ್ ಅಧ್ಯಕ್ಷರು ಮಸಿ ಬಳಿದ ಕಾರ್ಯಕರ್ತನಿಗೆ ನೋಟೀಸ್ ನೀಡುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ಗುಂಪುಗಾರಿಕೆಗೆ ನಿದರ್ಶನ. ಹಾಗಾಗಿಯೇ ಕಾಂಗ್ರೆಸ್ ಗುಂಪು ಈ ಕೃತ್ಯ ಎಸಗಿದೆ ಎಂದು ಟೀಕಿಸಿದರು.
ಈ ಮಸಿ ಪ್ರಕರಣದ ಹಿಂದೆ ಯಾರಿದ್ದಾರೆ. ಯಾರ ಕೈವಾಡವಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರ್ಕಾರವನ್ನು ಅವರು ಆಗ್ರಹಿಸಿದರು.
ಪ್ರೇಮಿಗಳಿಗೆ ಯಾರ ಲೈಸೆನ್ಸ್ ಅಗತ್ಯವಿಲ್ಲ. ಹಾಗಾಗಿ ಎನ್.ಎಸ್.ಯು.ಐ ಪ್ರೇಮಿಗಳ ರಕ್ಷಣೆಗೆ ಕಾರ್ಯಪಡೆ ರಚಿಸುವುದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ಅವರು, ಪ್ರೇಮಿಗಳ ಪರ, ವಿರೋಧ ವಿಚಾರದಲ್ಲಿ ಘರ್ಷಣೆ ಬೇಡ ಎಂದರು.
ಪ್ರೇಮಾ ಎನ್ನುವುದು ತೀರಾ ಖಾಸಗಿ ವಿಚಾರ. ಅದನ್ನು ಸಾರ್ವತ್ರೀಕರಣಗೊಳಿಸಿ ಗಲಾಟೆ, ಗೊಂದಲಗಳಿಗೆ ಎಡೆಮಾಡುವುದು ಸರಿಯಲ್ಲ. ಪಾಲಕರು ಸಹಾ ಪ್ರೇಮಿಗಳ ದಿನಾಚರಣೆ ಜಾಗೃತಿ ವಹಿಸುವುದು ಅತಿ ಮುಖ್ಯ ಎಂದರು.
ಪ್ರೇಮಿಗಳ ದಿನಾಚರಣೆ ಪುರಾತನ ಕಾಲದಿಂದ ಬಂದ್ದಲ್ಲ. ನಮ್ಮ ಸಂಸ್ಸೃತಿಯಲ್ಲೂ ಅದಿಲ್ಲ. ಸರಕು ಮಾರಾಟ ಮಾಡಲು ಸೃಷ್ಟಿಸಿಕೊಂಡಿರುವ ಒಂದು ತಂತ್ರ ಎಂದು ಹೇಳಿದರು.
ಗೋಹತ್ಯೆ ನಿಷೇಧ ಮಸೂದೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮತೀಯ ಭಾವನೆ ಕೆರಳಿಸಲು ಬಳಸಿಕೊಳ್ಳುತ್ತಿವೆ. ಇದು ಸರಿಯಲ್ಲ. ಗಾಂಧೀಜಿ ಸಹಾ ಸಂಪೂರ್ಣ ಗೋಹತ್ಯೆ ನಿಷೇಧ ಆಗಬೇಕು ಎಂದು ಹೇಳಿದ್ದರು. ಗಾಂಧೀಜಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅವರ ಹೆಸರು ಹೇಳುವ ನೈತಿಕತೆಯೂ ಇಲ್ಲ ಎಂದರು.
ಗೋ ಹತ್ಯೆ ನಿಷೇಧ ಮಸೂದೆಗೆ ವಿರೋಧ ವ್ಯಕ್ತಪಡಿಸುವ ರೈತರನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರ ಬಣ್ಣ ಬಯಲಾಗಿದೆ ಎಂದು ವೈಂಗ್ಯವಾಡಿದ ಅವರು, ಬಿಜೆಪಿ ಗೋಹತ್ಯೆ ನಿಷೇಧ ಮಸೂದೆಯನ್ನು ಸ್ವಾಗತಿಸುತ್ತದೆ ಎಂದರು.