ಬೆಂಗಳೂರು, ಏಪ್ರಿಲ್ ೧೩: ಅಂಗವಿಕಲರ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ, ಆರ್ಥಿಕ ಪುನರ್ವಸತಿ ಕಲ್ಪಿಸಿಕೊಡಲು ಸ್ವಯಂ ಉದ್ಯೋಗ/ಉನ್ನತ ವ್ಯಾಸಂಗ/ವೃತ್ತಿಪರ ಶಿಕ್ಷಣಕ್ಕಾಗಿ, ಉತ್ಪಾದನಾ ಕೇಂದ್ರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುವಂತೆ ಅಂಗವಿಕಲರ ತಾಂತ್ರಿಕ ಮತ್ತು ಉಧ್ಯಮಶೀಲತೆ ಸೌಲಭ್ಯ ಒದಗಿಸುವುದಕ್ಕಾಗಿ ಸಾಲ ನೀಡಲಾಗುವುದು.
ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (ನಿ) ವನ್ನು ಛಾನಲೈಸಿಂಗ್ ಏಜೆನ್ಸಿಯಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅದೇಶಿಸಿದೆ.
ವೈಯಕ್ತಿಕ ಸಾಲ: ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ೧೮ ರಿಂದ ೬೦ ವರ್ಷದೊಳಗಿನ ವಯೋಮಿತಿಯಲ್ಲಿರುವ, ಶೇಕಡ ೪೦ ಮತ್ತು ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಬಗ್ಗೆ ಗುರುತಿನ ಚೀಟಿ ಹೊಂದಿರಬೇಕು. ವಾರ್ಷಿಕ ಆದಾಯ ಪಟ್ಟಣ ಪ್ರದೇಶದವರಿಗೆ ರೂ.೫೦೦೦೦೦ ಕ್ಕಿಂತ ಕಡಿಮೆ ಇರಬೇಕು. ಗ್ರಾಮಾಂತರ ಪ್ರದೇಶದವರಿಗೆ ರೂ. ೩೦೦೦೦೦ ಗಳಿಗಿಂತ ಕಡಿಮೆ ಇರಬೇಕು. ತಹಶೀಲ್ದಾರರಿಂದ ಆದಾಯ ಪ್ರಮಾಣ ಪತ್ರ ಪಡೆದು ಲಗತ್ತಿಸಬೇಕು. ವಾಸ ಸ್ಥಳದ ದೃಡೀಕರಣ ಗುರುತಿನ ಚೀಟಿ ಅಥವಾ ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು. ಪಾಸ್ ಪೋರ್ಟ್ ಅಳತೆಯ ೩ ಛಾಯಾಚಿತ್ರಗಳು ಮತ್ತು ಪೂರ್ಣ ಪ್ರಮಾಣದ ಅಂಗವಿಕಲತೆ ತೋರಿಸುವ ಭಾವಚಿತ್ರ ಲಗತ್ತಿಸಬೇಕು. ಅಭ್ಯರ್ಥಿಗೆ ತಾನು ಕೈಗೊಳ್ಳುವ ಆರ್ಥಿಕ ಚಟುವಟಿಕೆ ಬಗ್ಗೆ ಪರಿಪೂರ್ಣ ಜ್ಞಾನವಿರಬೇಕು. ರೂ.೨೫೦೦೦ ಗಿಂತ ಹೆಚ್ಚಿನ ಘಟಕದ ಯೋಜನೆಗೆ ಯೋಜನಾ ವರದಿ ಸಲ್ಲಿಸಬೇಕು. ಅರ್ಜಿದಾರರು ಕೈಗೊಳ್ಳುವ ಯೋಜನೆಯ ಯಂತ್ರೋಪಕರಣಗಳು / ಉಪಕರಣಗಳು / ಸಾಮಗ್ರಿಗಳನ್ನು ಡಾಲರ್‍ಸ್ ಮೂಲಕ ತಯಾರಕರಿಂದ / ವಿತರಕರಿಂದ ಪಡೆದ ದರಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸ್ವಯಂ ಸೇವಾ ಸಂಸ್ಥೆಗಳು / ಸ್ವ ಸಹಾಯ ಗುಂಪುಗಳು ಸಾಲ ಪಡೆಯಲು ಬೇಕಾದ ಅರ್ಹತೆ, ಮತ್ತು ಸ್ವಯಂಸೇವಾ ಸಂಸ್ಥೆಗಳು / ಸ್ವಸಹಾಯ ಗುಂಪುಗಳಿಂದ ಸಾಲ ಪಡೆಯಲು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳ ಬಗ್ಗೆ, ಸಾಲಗಳ ಬಡ್ಡಿದರ ಒದಗಿಸಬೇಕಾದ ಭದ್ರತೆಗಳು, ಸಾಲಮರುಪಾವತಿ ಹಾಗು ಇನ್ನಿತರೆ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ಸಂಪರ್ಕಿಸಲು ಕೋರಿದೆ. ಸಂಬಂಧಿಸಿದ ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ದ್ದಿಪ್ರತಿಯಲ್ಲಿ ಏಪ್ರಿಲ್ ೨೦ ರೊಳಗೆ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಲು ಇಲಾಖಾ ಪ್ರಕಟಣೆಯಲ್ಲಿ ಕೋರಿದೆ.
ರಾಷ್ಟ್ರೀಯ ಯುವದಳ ದ ಸ್ವಯಂ ಸೇವಕ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು ಏಪ್ರಿಲ್ ೧೩: ಯುವ ಜನರಲ್ಲಿರುವ ಅಗಾಧವಾದ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಭಾರತ ಸರ್ಕಾರದ ಯುವ ವ್ಯವಹಾರ ಇಲಾಖೆಯಾದ ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರದಿಂದ ರಾಷ್ಟ್ರೀಯ ಯುವದಳದ ಸವಲತ್ತಿನ ಅಡಿಯಲ್ಲಿ ರಾಷ್ಟ್ರೀಯ ಕಾರ್ಯಕರ್ತರನ್ನು ಆಯ್ಕೆ ಮಾಡಲು ಉದ್ದೇಶಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೪ ತಾಲ್ಲೂಕುಗಳು ಹಾಗೂ ರಾಮನಗರ ಜಿಲ್ಲೆಯ ೪ ತಾಲ್ಲೂಕುಗಳಿಂದ ಆಸಕ್ತ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆಗಳು: ಏಪ್ರಿಲ್ ೧ ಕ್ಕೆ ೧೮ ವರ್ಷ ತುಂಬಿದ ಹಾಗೂ ೨೫ ವರ್ಷ ಮೀರದ ವಿದ್ಯಾರ್ಥಿಯೇತರ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಮಹಿಳೆಯರಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ರೂ. ೨೫೦೦ ಅನ್ನು ಮಾಸಿಕ ಸಂಭಾವನೆಯಾಗಿ ನೀಡಲಾಗುವುದು. ಪ್ರತಿ ತಾಲ್ಲೂಕಿನಿಂದ ಇಬ್ಬರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಪಡೆಯಲು / ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಮನ್ವಯಾಧಿಕಾರಿ ನೆಹರು ಯುವ ಕೇಂದ್ರ ಜಿ.ಇ.ಎಫ್ ಬ್ಲಾಕ್ ಇಂಡಸ್ಟ್ರಿಯಲ್ ಟೌನ್ ವೆಸ್ಟ್ ಆಫ್ ಕಾರ್ಡ್ ರೋಡ್ ರಾಜಾಜಿನಗರ ಬೆಂಗಳೂರು - ೫೬೦ ೦೪೪ ಇಲ್ಲಿ ಅಥವಾ ದೂರವಾಣಿ ಸಂಖ್ಯೆ ೦೮೦- ೨೩೨೦೯೧೫೭ ಅನ್ನು ಸಂಪರ್ಕಿಸಲು ಕೋರಿದೆ.
ಉಪನಿರ್ದೇಶಕರು (ಪರವಾಗಿ)
ಬೆಂಗಳೂರು ಗ್ರಾಮಾಂತರ ಜಿಲ್ಲೆ