ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಕಡಲ ಕಿನಾರೆಯಲ್ಲಿ ಉಬ್ಬರ ರೇಖೆ ಸರ್ವೆಗೆ ಮೀನುಗಾರರಿಂದ ಭಾರಿ ವಿರೋಧ 

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಕಡಲ ಕಿನಾರೆಯಲ್ಲಿ ಉಬ್ಬರ ರೇಖೆ ಸರ್ವೆಗೆ ಮೀನುಗಾರರಿಂದ ಭಾರಿ ವಿರೋಧ 

Thu, 01 Feb 2024 22:22:43  Office Staff   SOnews

ಪೊಲೀಸರಿಂದ ಲಾಠಿಚಾರ್ಜ್ ಹಲವರು ಗಾಯ, ೧೮ಜನ ವಶಕ್ಕೆ

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಕಡಲ ತೀರದ ಮೀನುಗಾರರ ಕೇರಿಯಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ ನಯನಾ ಗುರುವಾರದಂದು ಈಗಾಗಲೆ ಭಾರತ ಸರಕಾರದಿಂದ ಅನುಮೋಧಿತ CZMP-2019 (ಸಿ. ಆರ್. ಜೆಡ್) ನಕ್ಷೆ ಗಳಿಗೆ ಹೊಸದಾಗಿ HTL line ( ಉಬ್ಬರ ರೇಖೆ) ಗುರುತು ಮಾಡಲು ಬಂದಾಗ ಮೀನುಗಾರರ ವಿರೋಧ ವ್ಯಕ್ತಪಡಿಸಿದಾಗ ಪೊಲೀಸರಿಂದ ಲಾಠಿಚಾರ್ಜ ನಡೆಸಲಾಯಿತು ಎಂದು ವರದಿಯಾಗಿದೆ.

ಮಹಿಳೆಯರು ವಯೋವೃದ್ಧರು ಎನ್ನದೆ ಪೊಲೀಸರು ನಿರ್ದಯವಾಗಿ ಲಾಠಿ ಬೀಸಿದ್ದು ಹಲವು ಮಹಿಳೆಯರ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರ ಲಾಠಿ ಏಟಿಗೆ ಹಲವು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರದ ಕಾರ್ಯಕ್ಕೆ ಅಡ್ಡಿ ಪಡಿಸಿದ ಅರೋಪದಡಿ ೧೮ ಮಂದಿ ಮೀನುಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ದೊರಕಿದೆ.

ಸಾಗರಮಾಲ ಯೋಜನೆಯಡಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್‌ಪಿಪಿಎಲ್) ಖಾಸಗಿ ಕಂಪನಿಯಿಂದ ಖಾಸಗಿ ಬಂದರ್ ನಿಮಾರ್ಣವಾಗುತ್ತಿದ್ದು ಈ ಬಂದರ್ ಗೆ ಉತ್ತಮ ರಸ್ತೆ ಕಲ್ಪಿಸಲು ಸಮುದ್ರ ತೀರವನ್ನೇ ತಮ್ಮ ಬದುಕನ್ನಾಗಿ ರೂಪಿಸಿಕೊಂಡಿರುವ ೧೦೦೦ ಕ್ಕೂ ಹೆಚ್ಚು ಕುಟುಂಬಗಳನ್ನು ಒಕ್ಕಲೆಬ್ಬಸುವ ಷಡ್ಯಂತ್ರ ನಡೆಯುತ್ತಿದೆ. ಮೀನುಗಾರರ ವಿರೋಧವನ್ನು ಲೆಕ್ಕಿಸದೆ ಪೊಲೀಸ್ ಶಕ್ತಿ ಬಳಸಿ ಸರ್ಕಾರದ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ ಎಂಬ ಆರೋಪವನ್ನು ಅಲ್ಲಿನ ಸ್ಥಳಿಯ ಮೀನುಗಾರರು ಮಾಡುತ್ತಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ಹಸಿಮೀನು ವ್ಯಾಪರಸ್ಥರ ಸಂಘದ  ಮಾಜಿ ಅಧ್ಯಕ್ಷ ಗಣಪತಿ ತಾಂಡೇಲ,  ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಈಗಾಗಲೆ ಭಾರತ ಸರ್ಕಾರದಿಂದ ಅನುಮೋಧಿತ CZMP-2019 (ಸಿ. ಆರ್. ಜೆಡ್) ನಕ್ಷೆ ಗಳಿಗೆ ಹೊಸದಾಗಿ HTL line ( ಉಬ್ಬರ ರೇಖೆ) ಗುರುತು ಮಾಡಲು ಬಂದಾಗ (map  no KA 25 ದಲ್ಲಿ HTL line ಗುರುತಿಸಿದ್ದು ಇದೆ) ಮೀನುಗಾರರು ನಮಗೆ ನೀಡಿದ ಆಶ್ರಯ ಯೋಜನೆ ಮನೆಗಳಿರುವ ಗ್ರಾಮ ನಕಾಶೆ ಕಾಸರಕೋಡ ಟೆಕ್ಕಾ 2 (missing village) ಅನ್ನು ಕರಾವಳಿ ವಲಯ ನಿರ್ವಹಣಾ ನಕ್ಷೆ (CZMP)ಯಲ್ಲಿ ತೋರಿಸಿ. ಕೇವಲ ಖಾಸಗಿ ಬಂದರಿಗಾಗಿ  ಹೊಸ ರಸ್ತೆಗಾಗಿ ತಮ್ಮ ಅಧಿಕಾರ ವ್ಯಾಪ್ತಿಗೆ ಬರದಿದ್ದರು ಹೊಸದಾಗಿ  ಸಮುದ್ರ ಉಬ್ಬರ ರೇಖೆ ತಿದ್ದುವದು ಸರಿಯಲ್ಲ ಎಂದು ತಿಳಿಸಿದಾಗ ಕೋಪಗೊಂಡ AC ಮೇಡಂ ಮೀನುಗಾರರ ಮೇಲೆ ಪೊಲೀಸರಿಂದ ಲಾಟಿ ಚಾರ್ಜ ಮಾಡಿ ಹಲವರನ್ನು ಬಂದಿಸಿ ಅಜ್ಞಾತ ಸ್ಥಳಕ್ಕೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದು, CRZ ಕಾನೂನಿನಡಿಯಲ್ಲಿ ಎಂದು ಉಲ್ಲೇಖಿಸಿ 700 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಿ  ಸಾಂಪ್ರದಾಯಿಕ ಮೀನುಗಾರ ಜೀವನಾಂಶ ನಾಶ ಮಾಡುವದನ್ನು ನಾವು ವಿರೋಧಿಸುತ್ತವೆ ಎ೦ದು  ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನುಗಾರ ಮುಖಂಡ ಭಾಸ್ಕರ್ ಎನ್ನುವವರು, ನಾವು ಕಳೆದ ೭೦ವರ್ಷಗಳಿಂದ ಸಮುದ್ರ ತೀರದಲ್ಲೇ ಬದುಕನ್ನು ಕಟ್ಟಿಕೊಂಡಿದ್ದೇವೆ. ಇಲ್ಲಿ ಸುಮಾರು ೬೦೦ ಮನೆಗಳಿಗೆ ಸರ್ಕಾರವೇ ಪಟ್ಟಾ ನೀಡಿದೆ. ಈಗ ಬಂದು ಮತ್ತೊಮ್ಮೆ ಸರ್ವೇ ಮಾಡಿ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಲು ನೋಡುತ್ತಿದ್ದಾರೆ. ಇದನ್ನು ಮಾಡಲು ನಾವು ಬಿಡೇವು. ಸಹಾಯಕ ಆಯುಕ್ತರು ನಮ್ಮ ಸಮಸ್ಯೆಗಳನ್ನು ಕೇಳದೆ ಸರ್ಕಾರದ ಆದೇಶ ಪಾಲಿಸುತ್ತೇವೆ ಎಂದು ಹೇಳಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

 


Share: