ಬೆಂಗಳೂರು, ಜನವರಿ 11:ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಳಸಿದ ಬ್ಲಡಿ ಬಾಸ್ಟರ್ಡ್, ಬೋಸುಡಿ ಮಗ ಪದ ಇಡೀ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು, ಸಾರ್ವಜನಿಕವಾಗಿ ಈ ಹೇಳಿಕೆಗೆ ತೀವ್ರ ಚರ್ಚೆ, ಟೀಕೆ ವ್ಯಕ್ತವಾಗಿದೆ.
ರಾಜ್ಯದ ಬಹುತೇಕ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ದೇವೇಗೌಡರ ವಿರುದ್ಧ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆಗಳು, ಧರಣಿಗಳು, ಪ್ರತಿಕೃತಿ ದಹನದಂತಹ ಘಟನೆಗಳು ಜರುಗಿವೆ.
ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಎರಡು ಕಡೆ ಪ್ರತಿಭಟನಾ ಮೆರವಣಿಗೆ ನಡೆಸಿ ಗೌಡರ ಪ್ರತಿಕೃತಿಗಳನ್ನು ದಹಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಮುಖ್ಯಮಂತ್ರಿ ಸ್ಧಾನಮಾನಕ್ಕೆ ಕುಂದು ತರುವಂತೆ ಮಾತನಾಡಿರುವ ಗೌಡರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ದೇವೇಗೌಡರ ವಿರುದ್ಧ ನಡೆದ ಪ್ರತಿಭಟನೆ ಮಾರಾಮಾರಿ ಹಂತಕ್ಕೆ ತಲುಪಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮೈಸೂರಿನಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅಭಿಮಾನಿಗಳ ಸಂಘ ದೇವೇಗೌಡರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಜೆಡಿಎಸ್ ಬೆಂಬಲಿತ ವಕೀಲನೊಬ್ಬ ಕೆಟ್ಟದಾಗಿ ನಿಂದಿಸಿದ್ದರಿಂದ ಸಿಟ್ಟಿಗೆದ್ದ ಪ್ರತಿಭಟನಾ ನಿರತರು ಆತನಿಗೆ ಗೂಸಾ ಕೊಟ್ಟಿದ್ದು ಸಕಾಲದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಹೆಚ್ಚಿನ ಮಾರಾಮಾರಿಯನ್ನು ನಿಲ್ಲಿಸಿದ್ದಾರೆ.
ಅದೇ ರೀತಿ ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್‌ನ ಕಾರ್ಯಕರ್ತರು ಚಪ್ಪಲಿ ಎಸೆದಿದ್ದರಿಂದ ಪರಿಸ್ಧಿತಿ ಕೆಲ ಕಾಲ ಉದ್ವಿಗ್ನಗೊಂಡಿತ್ತು.
ಗೌಡರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರ ಕುಮ್ಮಕ್ಕಿನಿಂದ ಚಪ್ಪಲಿ ಎಸೆಯಲಾಗಿದೆ. ಕೂಡಲೇ ಚಪ್ಪಲಿ ಎಸೆದವನನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದು ಪರಿಸ್ಧಿತಿ ಉದ್ವಿಗ್ನತೆಗೆ ಕಾರಣವಾಯಿತು. ಪೊಲೀಸರು ಪ್ರತಿಭಟನಾ ನಿರತರ ಮನವೊಲಿಸಿ ತಹಬದಿಗೆ ತಂದರು.
ಇದಲ್ಲದೇ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರುಗಳಲ್ಲೂ ಪ್ರತಿಭಟನೆಗಳು ನಡೆದಿವೆ. ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಬಿಜೆಪಿ ಸಂಸದರು, ಶಾಸಕರು ದೇವೇಗೌಡರ ವಿರುದ್ಧ ಪ್ರತಿಭಟನೆ ನಡೆಸಿ ಅವರ ವರ್ತನೆಯನ್ನು ಖಂಡಿಸಿದ್ದಾರೆ.