ಹಾಸನ, ಫೆ.೨೩- ಅಧಿಕಾರಿಗಳಿಂದ ಕಡತ ಕಿತ್ತುಕೊಳ್ಳಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿ ಪೊಲೀಸರು ಬಂಧಿಸಿದ್ದರು ಎಂದು ಆರೋಪಿಸಿ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಹಾಸನ ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಶರತ್‌ಚಂದ್ರ ಅವರಿಗೆ ಮನವಿ ಸಲ್ಲಿಸಿ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರುದ್ರಪ್ಪ ಮತ್ತು ಶಿವಯೋಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಕಳೆದ ವಾರ ಕಚೇರಿಯ ಕಡತಗಳನ್ನು ಪ್ರವಾಸಿ ಮಂದಿರಕ್ಕೆ ತಂದು ಸಿದ್ದಪಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಬಿಜೆಪಿ ಕಾರ್ಯಕರ್ತರು ಕಾನೂನು ಬಾಹಿರ ಎಂದು ಪ್ರಶ್ನಿಸಿದ್ದರು. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಮತ್ತು ಇಂಜಿನಿಯರ್‌ಗಳು ಸೇರಿ ಬಿಜೆಪಿ ಕಾರ್ಯಕರ್ತರುಗಳಾದ ರಾಮಚಂದ್ರ, ಪ್ರಭಾಕರ ಮತ್ತು ರಂಗಸ್ವಾಮಿ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಸುಂದರ್ ಆರೋಪಿಸಿದರು.
ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಅವರಿಗೆ ಮನವಿ ಮಾಡಿದರು.
ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಿದ್ದ ಕಾರ್ಯಕರ್ತರಲ್ಲಿಯೇ ಗೊಂದಲ ಉಂಟಾಗಿತ್ತು. ಒಂದು ಗುಂಪು ಬೀದಿಗಳಿದು ಪ್ರತಿಭಟನೆ ಮಾಡಬೇಕೆಂದರೆ ಇನ್ನೊಂದು ಗುಂಪು ಅದಕ್ಕೆ ವಿರುದ್ಧವಾಗಿ ನಿಂತಿತು. ಕಡೆಗೆ ಮನವಿ ಸಲ್ಲಿಸಲಷ್ಟೇ ಸೀಮಿತವಾದ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆ ಸಂದರ್ಭದಲ್ಲಿ ದಹಿಸಲು ಸಿದ್ದಪಡಿಸಿದ್ದ ಅಧಿಕಾರಿಗಳ ಪ್ರತಿಕೃತಿಗಳನ್ನು ಸುಡದೆ ಬೀದಿಯಲ್ಲೆ ಬಿಟ್ಟು ಬಿಟ್ಟು ತೆರಳಿದ್ದು ನೆಗೆ ಪಾಟಲಿಗೆ ಗುರಿಯಾಯಿತು.