ಭಟ್ಕಳ, ಸೆಪ್ಟೆಂಬರ್ 30: ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಜಿಲ್ಲಾ ಅಧ್ಯಕ್ಷ ಶಾಂತರಾಮ ಹೆಗಡೆಯವರೇ ಕಾರಣ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಕಾನಡೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕೋಲಾಹಲದ ನೆಲದಲ್ಲಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿದ್ದ ಕಾಂಗ್ರೆಸ್ ವಿಧಾನ ಸಭಾ ಸದಸ್ಯರ ಸಂಖ್ಯೆ ದೇಶಪಾಂಡೆ ಆಗಮನದೊಂದಿಗೆ ೬ರಿಂದ ೧ಕ್ಕೆ ಇಳಿದಿದೆ. ಲೋಕಸಭಾ ಸದಸ್ಯರೂ ದೇಶಪಾಂಡೆಯ ಕಾರಣದಿಂದ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನಾಯಕರೆಲ್ಲರೂ ಸೋಲಬೇಕು. ತಾನೊಬ್ಬ ಮಂತ್ರಿಯಾಗಬೇಕು ಎಂದರೆ ಪಕ್ಷವನ್ನು ಉಳಿಸುವುದಾದರೂ ಹೇಗೆ ಎಂದು ಪ್ರಶ್ನೆಗಳ ಸುರಿಮಳೆಗರೆದರು. ಇವರ ಕಾರ್ಯವೈಖರಿಯಿಂದ ಬೇಸತ್ತ ಜಿಲ್ಲೆಯ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಪಕ್ಷವನ್ನು ಉಳಿಸಲು ಕೊನೆಯ ಹೋರಾಟಕ್ಕೆ ಇಳಿದಿದ್ದೇವೆ ಎಂದ ಅವರು ಈ ಹಾದಿಯಲ್ಲಿ ಪಕ್ಷ ಕೈಗೊಳ್ಳಲಿರುವ ಯಾವುದೇ ಕ್ರಮವನ್ನು ಎದುರಿಸಲು ಸಿದ್ದ ಎಂದು ಉತ್ತರಿಸಿದರು.