ಬೆಂಗಳೂರು, ಮಾ. ೨: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಈ ತಿಂಗಳ ೧೮ ರಿಂದ ೩೧ ರ ವರೆಗೆ ನಡೆಯಲಿದ್ದು, ಪರೀಕ್ಷೆಗಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಹೇಳಿದರು.
ಪಿಯುಸಿ ಪರೀಕ್ಷೆಯ ಫಲಿತಾಂಶ ಮೇ ತಿಂಗಳ ಮೊದಲವಾರದಲ್ಲಿ ಪ್ರಕಟಿಸಲಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಿಂದ ಪರೀಕ್ಷೆಗೆ ತೊಂದರೆಯಾಗುವಂತಿದ್ದರೆ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು ೩೩೫೭ ಕಾಲೇಜುಗಳು ೬,೫೧,೭೭೧ ವಿದ್ಯಾರ್ಥಿಗಳು ಹಾಜರಾಗಲಿದ್ದು, ರಾಜ್ಯಾಂದ್ಯಂತ ಒಟ್ಟು ೯೦೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ೫೨ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಹಾಗೂ ೧೯ ಅತೀ ಸೂಕ್ಷ್ಮ ಪರಿಕ್ಷಾ ಕೇಂದ್ರಗಳು ಸೇರಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಹಾಗೂ ಅಭ್ಯರ್ಥಿ ಪಟ್ಟಿಗಳನ್ನು ಮುದ್ರಿಸಿ ಆಯಾ ಕಾಲೇಜುಗಳಿಗೆ ಕಳಿಸಿಕೊಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ರಾಜ್ಯಾಂದ್ಯಂತ ಒಟ್ಟು ೯೦ ಜಿಲ್ಲಾ ಜಾಗೃತ ದಳಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ೨೭೦೦ ರಷ್ಟು ವಿಶೇಷ ಜಾಗೃತ ದಳದ ಸದಸ್ಯರುಗಳನ್ನಾಗಿ ಪರಿಕ್ಷಾ ಕೇಂದ್ರಗಳಿಗೆ ನೇಮಕಾತಿ ಮಾಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಜಿಲ್ಲಾಧಿಕಾರಿಗಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೆರವು ಪಡೆಯಲಾಗುವುದು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಮೋಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ. ಪರಿಕ್ಷಾ ವೇಳೆಗಳಲ್ಲಿ ಮೋಬೈಲ್ ಫೋನ್ ಬಳಸಿದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಬೆಂಗಳೂರು, ಮೈಸೂರು, ಬೆಳಗಾಂ, ದಾವಣಗೆರೆ, ಮಂಗಳೂರು ನಗರಗಳ ಜೊತೆಗೆ ಈ ವರ್ಷ ಹೊಸದಾಗಿ ನಡೆಸಲಾಗುವುದು ಎಂದರು.
ದ್ವಿತಿಯ ಪಿಯುಸಿ ಪರಿಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಳೆದ ವರ್ಷದಂತೆ ಈ ವರ್ಷವೂ ಸಹಾಯವಾಣಿ ಆರಂಭಿಸಿದ್ದು, ಈ ತಿಂಗಳ ೮ ರಿಂದ ೧೫ ರವರೆಗೆ ವಿದ್ಯಾರ್ಥಿಗಳು ಮತ್ತು ಪೊಷಕರು ದೂರವಾಣಿ ೦೮೦-೨೩೩೬೬೭೭೮ ಅಥವಾ ೦೮೦-೨೩೩೬೬೭೭೯ ಸಂರ್ಪಕಿಸಿ ಮಾಹಿತಿ ಪಡೆಯಬಹುದು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗ: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅದ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೪೩೭ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಈ ಶೈಕ್ಷಣಿಕ ಸಾಲಿನಿಂದ ವಿಜ್ಞಾನ ವಿಭಾಗವನ್ನು ಆರಂಭಿಸಲಾಗುವುದು ಜೊತೆಗೆ ೧೭೪೮ ವಿಜ್ಙಾನ ಉಪನ್ಯಾಸಕರನ್ನ ನೇಮಕಮಾಡಿಕೊಳ್ಳಲಾಗುವುದು ಎಂದರು.
೨೭೦ ಪದವಿ ಪೂರ್ವ ಕಾಲೇಜುಗಳಲ್ಲಿ ವಾಣಿಜ್ಯ ಆರಂಭಿಸಲಾಗುವುದು. ೨೭೦ ವಾಣಿಜ್ಯ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದರು.