ಪರಮಾಣು ಸಾಮಗ್ರಿಗಳ ಭದ್ರತೆ ಮತ್ತು ಹೊಸ ಪರಮಾಣು ಸಾಮಗ್ರಿಗಳ ಉತ್ಪಾದನೆ - ಇವು ಶೃಂಗಸಭೆಯ ಎರಡು ಪ್ರಮುಖ ಕಾಳಜಿಗಳು. ಈ ಎರಡೂ ಅಂಶಗಳ ಸುತ್ತವೇ ಪರಮಾಣು ಪ್ರಸರಣ ನಿಷೇಧ ಒಪ್ಪಂದ ಮತ್ತು ಪರಮಾಣು ಸಾಮಗ್ರಿಗಳ ಕಡಿತ ಒಪ್ಪಂದಗಳನ್ನು ಹೆಣೆಯಲಾಗಿದೆ. ಭಾರತ ಮತ್ತು ಪಾಕಿಸ್ತಾನ ಈ ವರೆಗೆ ಇವು ತಾರತಮ್ಯ ಹೊಂದಿದೆ ಎಂದು ಸಹಿ ಹಾಕಲು ನಿರಾಕರಿಸಿರುವ ಒಪ್ಪಂದಗಳಿವು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಶೃಂಗಸಭೆಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಿದ ದೇಶಗಳ ಪ್ರತ್ಯೇಕ ಔತಣ ಕೂಟ ನಡೆಸಲಾಯಿತು. ಭಾರತಕ್ಕೆ ಅಲ್ಲಿ ಆಮಂತ್ರಣ ಇರಲಿಲ್ಲ ಎಂದು ಗಮನಾರ್ಹ. ಈ ಒಪ್ಪಂದಕ್ಕೆ ಇರಾನ್ ಸಹ ಸಹಿ ಹಾಕಿದ್ದು ಅದರ ಪರಮಾಣು ಚಟಯವಟಿಕೆ ಒಪ್ಪಂದದ ಯಾವ ಮೂಲ ಅಂಶಗಳನ್ನು ಉಲ್ಲಂಘಿಸಿಲ್ಲ. ಆದರೆ ಅದನ್ನು ಮರೆಮಾಚಲು ಅಮೆರಿಕ ಈ ಎಲ್ಲಾ ಸರ್ಕಸ್ಸು ಮಾಡಬೇಕಾಗಿ ಬಂದಿದೆ. ಆ ಒಪ್ಪಂದಕ್ಕೆ ಇನ್ನು ಸಹಿ ಹಾಕದ ಹೆಚ್ಚುವರಿ ಭಾಗದ ಕೆಲವು ಅಂಶಗಳನ್ನು ಮಾತ್ರ ಮನ್ನಿಸಿಲ್ಲ. ಅದು ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೇ ಎಂದು ಹಲವು ದೇಶಗಳು ಪ್ರಶ್ನಿಸಿವೆ. ಇದು ಪರಮಾಣು ಸಾಮಗ್ರಿಗಳು ಭಯೋತ್ಪಾದಕರ ಕೈಗೆ ಸಿಕ್ಕರೆ ಬರುವ ಅಪಾಯಗಳ ಭೂತ ಎಬ್ಬಿಸಿ ಇರಾನಿನ ಮೇಲೆ ದಿಗ್ಬಂಧನ ಹೇರಲು ಒತ್ತಡ ತಂತ್ರ.
ಪರಮಾಣು ಸಾಮಗ್ರಿಗಳು ಭಯೋತ್ಪಾದಕರ ಕೈಗೆ ಸಿಕ್ಕರೆ ಬರುವ ಅಪಾಯಗಳ ಬಗ್ಗೆ ಅಮೆರಿಕ ಎಷ್ಟು ಪ್ರಾಮಾಣಿಕವಾಗಿದೆ ಎಂದು ಪ್ರಶ್ನಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಇರುವ ಎರಡು ಅಂತರ್ರಾಷ್ಟ್ರೀಯ ಒಪ್ಪಂದಗಳಿಗೆ ಅಮೆರಿಕ ಸಹಿ ಹಾಕಿಲ್ಲ. 2005 ರಲ್ಲಿ ಅಸ್ತಿತ್ವಕ್ಕೆ ಬಂದ ಪರಮಾಣು ಸಾಮಗ್ರಿಗಳ ಭದ್ರತೆಗೆ ಒಪ್ಪಂದ ಮತ್ತು (ರಶ್ಯ ಪ್ರಸ್ತಾವಿಸಿದ) ಪರಮಾಣು ಭಯೋತ್ಪಾದಕತೆ ಹತ್ತಿಕ್ಕುವ ಅಂತರ್ರಾಷ್ಟ್ರೀಯ ಒಪ್ಪಂದ - ಇವೆರಡನ್ನೂ ಅಮೆರಿಕ ಮನ್ನಿಸಿಲ್ಲ. ಪರಮಾಣು ಸಾಮಗ್ರಿಗಳ ಮೇಲೆ ಅಣ್ವಸ್ತ್ರ ಹೊಂದಿರುವ ಪ್ರಬಲ ದೇಶಗಳ ಅಧಿಪತ್ಯ ಸಾಧಿಸುವುದು, ತಮ್ಮ ಅಧಿಪತ್ಯಕ್ಕೆ ಧಕ್ಕೆ ತರುವ ದೇಶಗಳಿಗೆ ಪರಮಾಣು ತಂತ್ರಜ್ಞಾನ ಸಿಗದಂತೆ ಮಾಡುವುದು ಈ ಶೃಂಗಸಭೆಯ ಆಶಯ. ಇದು ಇಂದಿನ ಪರಿಸ್ಥಿತಿಯಲ್ಲಿ ನಡೆಯದ ಮಾತು. ಪರಮಾಣು ತಂತ್ರಜ್ಞಾನ ಸುಲಭಸಾಧ್ಯ ಮತ್ತು ಅಗ್ಗ ಆಗುತ್ತಿರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣದಿಂದ ಮಾತ್ರ ಬಾಂಬು ತಯಾರಿಸಬಹುದಾದ ಪರಮಾಣು ಸಾಮಗ್ರಿಗಳು ಅಪಾಯಕಾರಿ ಗುಂಪುಗಳ ಕೈ ಸೇರದಂತೆ ತಡೆಯಲು ಸಾಧ್ಯ. ತಮ್ಮ ಭದ್ರತೆಗೆ ಪರಮಾಣು ಅಸ್ತ್ರಗಳು ಬೇಕು. ಇತರರಿಗೆ ತಮ್ಮ ಭದ್ರತೆಯ ಭರವಸೆ ಸಾಕು ಎಂಬ ನೀತಿಯನ್ನು ಹೆಚ್ಚಿನ ದೇಶಗಳು ಒಪ್ಪುವುದಿಲ್ಲ. ಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣದ ಬಗ್ಗೆ ಶೃಂಗಸಭೆಯಲ್ಲಿ ಕೇಳಿಬಂದರೂ (ನಮ್ಮ ಪ್ರಧಾನಿ ಭಾಷಣ ಸೇರಿದಂತೆ) ಅದರ ಅಜೆಂಡಾದಲ್ಲಿ ಸೇರಿರಲಿಲ್ಲ. ಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣ ಜಗತ್ತಿನ ಪ್ರಮುಖ ಅಜೆಂಡಾ ಆಗುವ ವರೆಗೆ ಪರಮಾಣು ಸಾಮಗ್ರಿಗಳ ಭದ್ರತೆಯ ಮಾತು ಹುಸಿ ಎಂಬುದು ಸ್ಪಷ್ಟ.
ಇರಾನ್ ಈ ಶೃಂಗಸಭೆಯ ಬೆನ್ನಿನಲ್ಲೇ ಪರಮಾಣು ನಿಶ್ಶಸ್ತ್ರೀಕರಣ ಶೃಂಗಸಭೆ ಸಂಘಟಿಸಿದೆ. ಈ ಶೃಂಗಸಭೆಯಲ್ಲಿ ಪಶ್ಚಿಮ ಏಶ್ಯಾವನ್ನು ಪರಮಾಣು ಅಸ್ತ್ರ ರಹಿತ ಪ್ರದೇಶವಾಗಿ ಘೋಷಿಸುವ ಯೋಚನೆಯಿದೆ. ಆದರೆ ಅಮೆರಿಕ ಇದು ಇಸ್ರೇಲ್ ಮತ್ತು ತನ್ನ ನೆಲೆಗಳಿಗೆ ಅದು ಅನ್ವಯವಾಗಬಾರದು ಎನ್ನುತ್ತಿದೆ. ಪಶ್ಚಿಮ ಏಶ್ಯಾದಲ್ಲಿ ಇಸ್ರೇಲಿನ ಭಯೋತ್ಪಾದಕ ಪಾತ್ರ ಗಮನಿಸಿದರೆ ವಾಶಿಂಗ್ಟನ್ ಶೃಂಗಸಭೆಯ ಆಶಯಗಳು ಎಷ್ಟು ಅಪ್ರಾಮಾಣಿಕ ಎಂದು ಸ್ಪಷ್ಟವಾಗುತ್ತದೆ.
ವಾಶಿಂಗ್ಟನ್ ಶೃಂಗಸಭೆಯ ಬಗ್ಗೆ ನಮ್ಮ ಮಾಧ್ಯಮಗಳಲ್ಲಿ ಚರ್ಚೆ, ಸ್ಪಂದನ ಸಾಕಷ್ಟು ಚೋದ್ಯಕರವಾಗಿದ್ದವು. ಒಬಾಮಾ ಭಾರತ ಅಥವಾ ಪಾಕಿಸ್ತಾನದ ಪ್ರಧಾನಿಯನ್ನು ಮೊದಲು ಭೇಟಿಯಾದರೇ, ಯಾರ ಜತೆ ಎಷ್ಟು ಹೊತ್ತು ಕಳೆದರು, ಯಾವ ಔತಣಕೂಟಕ್ಕೆ ಯಾರಿಗೆ ಆಮಂತ್ರಣ ಇತ್ತು, ಒಬಾಮಾ ಭಾರತಕ್ಕೆ ಎಷ್ಟು ಆದ್ಯತೆ ಕೊಡ್ತಾರೆ, ಆದ್ಯತೆ ಕೊಡ್ತಾರಾ ಇಲ್ವಾ ? ಇಂತಹ ಪ್ರಶ್ನೆಗಳ ಬಗ್ಗೆ ತಲೆ ಕೆಡಿಸಿಕೊಂಡರು. ಎಲ್ಲಾ ದೇಶಗಳ ಮೇಲೆ ಅಣ್ವಸ್ತ್ರ ಬಲದ ಆಧಾರದ ಮೇಲೆ ಅಧಿಪತ್ಯ ನಡೆಸುವುದು, ತಮ್ಮ ಮೂಗಿನ ನೇರಕ್ಕೆ ಎಲ್ಲರೂ ನಡೆಯುವಂತೆ ಮಾಡುವುದು ಮಾತ್ರ ಅಮೆರಿಕದ ಒಬಾಮಾರ ಆದ್ಯತೆ ಎಂದು ಅವರಿಗೂ ಅರ್ಥವಾಗಲಿಲ್ಲ.ಜನಕ್ಕೂ ಅರ್ಥವಾಗದಂತೆ ಮಾಡಿದರು 0
ಸರ್ವಾಧಿಕಾರ ಕ್ರಮಗಳಿಗೆ ಕಡಿವಾಣ ಹಾಕಿದ 18ನೇ ತಿದ್ದುಪಡಿ
ಪಾಕಿಸ್ತಾನದ ಪಾರ್ಲಿಮೆಂಟು ಮೂರನೇ ಎರಡು ಬಹುಮತದಿಂದ ಪಾಸು ಮಾಡಿದ 18 ನೇ ಸಂವಿಧಾನ ತಿದ್ದುಪಡಿ ಸರ್ವಾಧಿಕಾರ ಕ್ರಮಗಳಿಗೆ ಕಡಿವಾಣ ಹಾಕುವ ಹಲವು ಬದಲಾವಣೆಗಳನ್ನು ತಂದಿದೆ. ಅಧ್ಯಕ್ಷರು ಸಂವಿಧಾನ ಮತ್ತು ಪಾರ್ಲಿಮೆಂಟು ತಡೆ ಹಿಡಿಯುವ ಅಥವಾ ವಿಸಜರ್ಸುವ ಅಧಿಕಾರಕ್ಕೆ ಕಡಿವಾಣ ಹಾಕಿದೆ. ಅದು ದೇಶದ್ರೋಹದ ಕ್ರಮ ಎಂದಿದೆ.ಇದಲ್ಲದೆ ನೇಶನಲ್ ಫೈನಾನ್ಸ್ ಕಮಿಶನ್ ಸಂಘಟಿಸಿ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ, ರಾಜಕೀಯ ಅಧಿಕಾರ ಕೊಟ್ಟಿದೆ. ರಾಜ್ಯಗಳಿಗೆ ತೆರಿಗೆ ಆದಾಯದ ದೊಡ್ಡ ಭಾಗ ಕೊಟ್ಟಿರುವುದು, ಸಣ್ಣ ರಾಜ್ಯಗಳಿಗೆ ಅನುಕೂಲಕರವಾದ ಆದಾಯ ಹಂಚಿಕೆಯಲ್ಲಿ ಜನಸಂಖ್ಯೆಯೇ ಮುಖ್ಯ ಆಧಾರವಾಗಿ ತೆಗೆದು ಹಾಕಿರುವುದು, ತೈಲ-ಗ್ಯಾಸ್ ಆದಾಯದಲ್ಲಿ ರಾಜ್ಯಗಳಿಗೆ ಪಾಲು ? ಇವು ಪ್ರಜಾಪ್ರಭುತ್ವ ಮತ್ತು ವಿಕೆಂಧ್ರೀಕರಣ ವನ್ನು ಮುಂದಕ್ಕೊಯ್ಯುವ ಇತರ ಕ್ರಮಗಳು.
ಆದರೆ ಇಂತಹ ಪ್ರಮುಖ ಬದಲಾವಣೆ ಅಷ್ಟಾಗಿ ಗಮನ ಸೆಳೆದಿಲ್ಲ. ಅಮೆರಿಕದ ಅಫ್-ಪಾಕ್ ರಣನೀತಿಯ ಭಾಗವಾಗಿ ಪುನಃ ಮಿಲಿಟರಿಗೆ ರಾಜಕೀಯ ಪ್ರಾಮುಖ್ಯತೆ ಬಂದಿರುವ ಹಿನ್ನಲೆಯಲ್ಲಿ ನೋಡಿದರೆ ಇದು ಅಂತಹ ಪರಿಣಾಮಕಾರಿ ಕ್ರಮ ಆಗಲಿಕ್ಕಿಲ್ಲ.ಈಗ ಜದರ್ರಿಯವರ ಅಧಿಕಾರಕ್ಕೆ ಕಡಿವಾಣ ಹಾಕಲು ಇದು ಬಂದಿದೆ. ರಾಜಕೀಯ ಪಕ್ಷಗಳ ಜಗಳ ‘ಬಗೆ ಹರಿಸುವ ನೆಪದಲ್ಲಿ ಮಿಲಿಟರಿ ಸವರ್ಧಕಾರಕ್ಕೆ ಯಾವತ್ತೂ ಅವಕಾಶ ಇದೆ ಎಂಬ ಗುಮಾನಿಯನ್ನೂ ಹಲವರು ವ್ಯಕ್ತ ಪಡಿಸಿದ್ದಾರೆ. ಆದರೂ ಇದು ಒಂದು ಗಮನಾರ್ಹ ಬೆಳವಣಿಗೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಶ್ರೀಲಂಕಾದಲ್ಲಿ ರಾಜಪಕ್ಸೆ ಪಕ್ಷಕ್ಕೆ ಜಯ
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಅಧ್ಯಕ್ಷ ಮಹೀಂದ್ರ ರಾಜಪಕ್ಸರವರ ಪಕ್ಷದ ನಾಯಕತ್ವದ ರಂಗ ಭಾರೀ ಜಯಗಳಿಸಿದೆ. ಅವರ ನಾಯತ್ವದಲ್ಲಿ `ಯುನೈಟೆಡ್ ಪ್ರೋಗ್ರೆಸ್ಸಿವ್ ಫ್ರೀಡಂ ಅಲಯನ್ಸ‘ ರಂಗ ಮೂರನೇ ಎರಡು ಬಹುಮತಕ್ಕೆ ಕೆಲವೇ ಕಡಿಮೆ ಸೀಟು ಗಳಿಸಿದೆ. ಶೇಕಡಾ 60 ಮತಗಳಿಕೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಯುನೈಟೆಡ್ ನೇಶನಲ್ ಪಾರ್ಟಿ ತನ್ನ ಬೆಂಬಲ ಹೆಚ್ಚಿಸಿಕೊಳ್ಳಲು ವಿಫಲವಾಗಿದೆ. ಮಾಜಿ ಮಿಲಿಟರಿ ಜನರಲ್ ಶರತ್ ಫೊನ್ಸೇಕಾ ನಾಯಕತ್ವದ ಮೂರನೇ ರಂಗ ಹೀನಾಯವಾಗಿ ಸೋತಿದೆ. ಈ ರಂಗ ಸಂಘಟಿಸಿದ ಜನತಾ ವಿಮುಕ್ತಿ ಪೆರುಮಾನ ಪರಾಭವ ಕಂಡಿದೆ.
ಆದರೆ ಜನರಲ್ ಶರತ್ ಫೊನ್ಸೇಕಾ ವೈಯಕ್ತಿಕವಾಗಿ ಆಯ್ಕೆಯಾಗಿದ್ದಾರೆ. ಉತ್ತರದ ತಮಿಳು ಬಹುಸಂಖ್ಯಾತ ಪ್ರದೇಶಗಳಲ್ಲಿ ತಮಿಳು ನೇಶನಲ್ ಅಲಯನ್ಸ್ ಉತ್ತಮ ಪ್ರದರ್ಶನ ಕೊಟ್ಟಿದೆ. ಆದರೆ ಈ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕೇವಲ ಶೇ. 55 ಆಗಿದೆ. ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಶೇ. 75 ಮತ್ತು ಹಿಂದಿನ ಪಾರ್ಲಿಮೆಂಟರಿ ಚುನಾವಣೆಗಳ ಸರಾಸರಿ ಶೇ. 60-65 ಕ್ಕಿಂತ ಇದು ತೀರಾ ಕಡಿಮೆ ಎಂದು ಗಮನಿಸಬೇಕು. ಉತ್ತರದ ತಮಿಳು ಪ್ರದೇಶಗಳಲ್ಲಿ ಇನ್ನೂ ಕಡಿಮೆ. ಇದು ಆತಂಕಕಾರಿ. ಈವರೆಗೆ ಎಲ್ಟಿಟಿಇ ಭಯೋತ್ಪಾದನೆಯ ಕಾರಣ ಕೊಟ್ಟು ಸಮರ್ಥಿಸಲಾಗುತ್ತಿದ್ದ ಹಲವು ದಮನಕಾರೀ ಸರ್ವಾಧಿಕಾರಿ ಕ್ರಮಗಳನ್ನು ಹಿಂತೆಗೆದುಕೊಳ್ಳುವುದು, ಎಲ್ಲಾ ವಿರೋಧ ಪಕ್ಷಗಳು ಮತ್ತು ತಮಿಳು ಮುಸ್ಲಿಂ ಮುಂತಾದ ಅಲ್ಪಸಂಖ್ಯಾತ ಗುಂಪುಗಳ ಜತೆ ಮಾತುಕತೆ ಸಹಕಾರದಿಂದ ಶಾಂತಿ ಬೆಳವಣಿಗೆಗೆ ಗಮನ ಕೊಡುವುದು - ಹೊಸ ಸರ್ಕಾರದ ಆದ್ಯತೆ ಆಗಬೇಕು. ಸೋತ ಮಾಜಿ ಮಿಲಿಟರಿ ಜನರಲ್ ಶರತ್ ಫೊನ್ಸೇಕಾ ಬಂಧನ, ಅವರ ವಿರುಧ್ಧ ಮಿಲಿಟರಿ ಕೊರ್ಟ್ ವಿಚಾರಣೆ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಮೇಲೆ ತೀವ್ರ ನಿರ್ಬಂಧಗಳು - ಮುಂತಾದವು ಈ ಭರವಸೆ ನೀಡುತ್ತಿಲ್ಲ.
ಸೌಜನ್ಯ: ಜನಶಕ್ತಿ