ಬೆಂಗಳೂರು, ಫೆಬ್ರವರಿ 24: ರಾಜ್ಯದ ರೈಲ್ವೆ ಅಭಿವೃದ್ಧಿಗೆ ಈ ಸಾಲಿನ ಕೇಂದ್ರ ಬಜೆಟ್ ಪೂರಕವಾಗಿದ್ದು, ರಾಜ್ಯಕ್ಕೆ ಈ ಬಾರಿ ಹೆಚ್ಚಿನ ಆಧ್ಯತೆ ದೊರೆತಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರೈಲ್ವೆ ಬಜೆಟ್ನಲ್ಲಿ ಹೊಸ ರೈಲು ಹಾಗೂ ಹೊಸ ಮಾರ್ಗಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಈ ಬಜೆಟ್ ರಾಜ್ಯದ ಜನತೆಗೆ ಸಂತಸ ತರುವಂತಿದೆ ಎಂದರು.
ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವತಂತ್ರ ನಂತರ ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಇಷ್ಟೊಂದು ಆದ್ಯತೆ ದೊರೆತಿರಲಿಲ್ಲ. ಈಗಲಾದರೂ ರಾಜ್ಯದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿರುವುದು ಅಭಿನಂದನಾರ್ಹ ಎಂದರು.
೬೦೦ ಕೋಟಿ
ರಾಜ್ಯದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳಿಗೆ ಈ ವರ್ಷ ೬೦೦ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದ ಅವರು ಹೇಳಿ ಕಳೆದ ವರ್ಷ ೩೦೦ ಕೋಟಿ ರೂ.ಗಳನ್ನು ರೈಲ್ವೆ ಯೋಜನೆಗಳಿಗಾಗಿಯೇ ಸರ್ಕಾರ ಬಿಡುಗಡೆ ಮಾಡಿತ್ತು ಎಂದರು.
ಮುಂದಿನ ೫ ವರ್ಷಗಳಲ್ಲಿ ೨೫೨೯ ಕೋಟಿ ರೂಗಳನ್ನು ರೈಲ್ವೆ ಯೋಜನೆಗಳಿಗಾಗಿಯೇ ಖರ್ಚುಮಾಡುವ ಸರ್ಕಾರ ಹೊಂದಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಯೋಜನೆಗಳನ್ನು ಹಾಗು ಆರ್ಥಿಕ ಸಹಾಯವನ್ನು ನೀಡಿದರೆ ರಾಜ್ಯ ಸರ್ಕಾರ ಸಹ ಅದಕ್ಕೆ ಪೂರಕವಾಗಿ ಕೆಲಸ ಮಾಡಲಿದೆ ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಸಮಗ್ರ ಪತ್ರ ಬರೆಯುವುದಾಗಿ ಹೇಳಿದರು.
ಮುಂಬರುವ ಕೇಂದ್ರ ಸಾಮಾನ್ಯ ಬಜೆಟ್ ಸಹ ರೈಲ್ವೆ ಬಜೆಟ್ ರೀತಿಯಲ್ಲಿಯೇ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಇರಲಿದೆ ಎನ್ನುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.