ಶಿವಮೊಗ್ಗ,ಮಾ,೨: ಕೋಮು ದಳ್ಳುರಿಯಿಂದ ತತ್ತರಗೊಂಡಿದ್ದ ಶಿವಮೊಗ್ಗ, ಹಾಸನದಲ್ಲಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬಹುತೇಕ ಶಾಂತ ವಾತಾವರಣ ನಿರ್ಮಾಣವಾಗಿದೆ. ಆದರೂ ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ.
ಎರಡೂ ನಗರಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ವಿಶೇಷ ಕಣ್ಗಾವಲು ಹಾಕಿದ್ದಾರೆ. ನಿನ್ನೆ ರಾತ್ರಿಯಿಂದೀಚೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಕುರಿತು ವರದಿಯಾಗಿಲ್ಲ. ಶಿವಮೊಗ್ಗದಲ್ಲಿ ನಿಷ್ಭೆಧಾಜ್ಞೆ ನಾಳೆ ವರೆವಿಗೆ ವಿಸ್ತರಿಸಲಾಗಿದೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಜ್ರೀನ್ ಲೇಖನದಿಂದಾಗಿ ರೊಚ್ಚಿಗೆದ್ದ ಮುಸ್ಲಿಂ ಸಮುದಾಯದವರು ಶಿವಮೊಗ್ಗ, ಹಾಸನ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಹಿಂಸಾಚಾರ ನಡೆದಿತ್ತು. ಶಿವಮೊಗ್ಗದ ನಗರದಲ್ಲಿ ಗುಂಪನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.
ಈ ಮಧ್ಯೆ ಬೆಂಗಳೂರು ನಗರದಲ್ಲೂ ಕೆಲೆವೆಡೆ ಇಂದು ಮಧ್ಯಾಹ್ನ ಕಲ್ಲು ತೂರಾಟ ನಡೆಸಿ ಪ್ರಕರಣ ವರದಿಯಾಗಿದೆ. ನಗರದ ಕಲಾಸಿಪಾಳ್ಯ, ಸಿಟಿ ಮಾರ್ಕೆಟ್ ಶಿವಾಜಿನಗರ ಪ್ರದೇಶಗಳಲ್ಲಿ ಪ್ರದರ್ಶನ ನಡೆಸಿದ ಒಂದು ಕೋಮಿನ ಜನ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಿದ್ದರಿಂದ ನಾಲ್ಕು ಬಸ್‌ಗಳಿಗೆ ಹಾನಿಯಾಗಿದ್ದು, ಇತರ ನಾಲ್ಕು ವಾಹನಗಳು ಜಖಂ ಆಗಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯತ್ರಿಸಿದ್ದಾರೆ. ಹಠಾತ್ ನಡೆದ ಘಟನೆಯಿಂದ ಬೆದರಿದ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದರಿಂದ ಈ ಪ್ರದೇಶಗಳಲ್ಲಿ ಬಿಕೋ ಎನ್ನುತ್ತಿದ್ದವು. ಬೆಂಗಳೂರಿನಲ್ಲಿ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸ್ ಕಮೀಷನರ್ ಶಂಕರ್ ಬಿದರಿ ತಿಳಿಸಿದರು.