ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೂವರು ಹಿರಿಯರಿಗೆ ಅಪ್ಪಾಜಿ ಸೌಹಾರ್ದ ಪ್ರಶಸ್ತಿ

ಮೂವರು ಹಿರಿಯರಿಗೆ ಅಪ್ಪಾಜಿ ಸೌಹಾರ್ದ ಪ್ರಶಸ್ತಿ

Sat, 24 Apr 2010 13:01:00  Office Staff   S.O. News Service
ಬೆಂಗಳೂರು, ಏ. 24 : ಕನ್ನಡ ಚಿತ್ರರಸಿಕರ ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುವ ನಟಸಾರ್ವಭೌಮ ವರನಟ ಡಾ.ರಾಜಕುಮಾರ್‍ ಅವರ 82ನೇ ಹುಟ್ಟಹಬ್ಬದ ಸಂಭ್ರಮದಂದು ಚಿತ್ರರಂಗಕ್ಕೆ ಅವಿರತ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ 'ಅಪ್ಪಾಜಿ ಸೌಹಾರ್ದ' ಪ್ರಶಸ್ತಿಯನ್ನು ರಾಜ್ ಕುಮಾರ್ ಕುಟುಂಬ ಇಂದು ನೀಡಿತು.

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ 'ಆಪರೇಶನ್ ಡೈಮಂಡ್ ರಾಕೆಟ್' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ದೊರೈ-ಭಗವಾನ್ ಜೋಡಿಯ ಭಗವಾನ್ ಅವರಿಗೆ, ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಜೀವ ತುಂಬಿದ ಹಿರಿಯ ನಟಿ ಶಾಂತಮ್ಮ ಮತ್ತು ಅರವತ್ತು ವರ್ಷಗಳಿಂದ ಚಿತ್ರರಂಗದ ಜೀವದಂತಿರುವ ಹಿರಿಯ ಪೋಷಕ ನಟ ಶಿವರಾಮ್ ಅವರಿಗೆ ಪ್ರಶಸ್ತಿ ನೀಡಲಾಯಿತು.

1 ಲಕ್ಷ ರು., ಪ್ರಶಸ್ತಿ ಫಲಕ ನೀಡಿ ಶಾಲು ಹೊದಿಸಿ ಆತ್ಮೀಯವಾಗಿ ಮೂವರು ಹಿರಿಯರನ್ನು ಸನ್ಮಾನಿಸಲಾಯಿತು. ರಾಜ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರು ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಇಡೀ ರಾಜ್ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಂತಮ್ಮ, ಭಗವಾನ್ ಮತ್ತು ಶಿವರಾಮ್ ರಾಜ್ ಜೊತೆಗೆ ಕಳೆದ ಗಳಿಗೆ, ಅವರ ವ್ಯಕ್ತಿತ್ವವನ್ನು ನೆನೆಸಿಕೊಂಡು ಗದ್ಗಿತರಾದರು. ರಾಜ್ ಕುಟುಂಬ ಸದಸ್ಯರಂತೆಯೇ ಇದ್ದ ಭಗವಾನ್ ಅವರು, ರಾಜ್ ಅವರು ಅದ್ಭುತ ಚಿತ್ರಗಳನ್ನು ಮಾತ್ರವಲ್ಲ ಮೂರು ಅನರ್ಘ್ಯ ರತ್ನಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಅಪ್ಪು ಹುಟ್ಟಿದಾಗ ರಾಜ್ ಚಿತ್ರೀಕರಣದಲ್ಲಿ ತೊಡಗಿದ್ದರು, ನಾನು ಪಾರ್ವತಮ್ಮನವರ ಜೊತೆಯಲ್ಲಿದ್ದೆ. ಹುಟ್ಟಿದ ನಂತರ ನನ್ನ ಕೈಗೇ ಮಗುವನ್ನು ಕೊಟ್ಟರು. ಆ ಗಳಿಗೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಆನಂದಭಾಷ್ಪ ಮಿಡಿದರು.

ಶಿವರಾಮ್ ಅವರು ಮಾತನಾಡಿ, ಈ ಅರವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇಂದು ದಕ್ಕಿದ್ದು ಎಲ್ಲಕ್ಕಿಂತ ಕಳಸಪ್ರಾಯವಾದಂಥ ಪ್ರಶಸ್ತಿ. ಜೀವನದಲ್ಲಿ ಏನೂ ಬೇಡ ಅನ್ನೋ ಸಂದರ್ಭದಲ್ಲಿ ಈ ಪ್ರಶಸ್ತಿ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ. ಭಾರೀ ಪ್ರೀತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ. ರಾಜ್ ಕುಮಾರ್ ಅವರು ನಮ್ಮನ್ನು ಎಂದೆಂಗೂ ಹೀಗೆಯೇ ಆಶೀರ್ವದಿಸುತ್ತಿರಲಿ ಎಂದು ಭಾವುಕರಾದರು.

ಶಾಂತಮ್ಮ ಅವರು ಕೂಡ, ರಾಜ್ ಬ್ಯಾನರಿನ ಚಿತ್ರಗಳಲ್ಲಿ ನಟಿಸಿದ್ದು ಮತ್ತು ಚಿತ್ರಗಳ ಯಶಸ್ಸಿನಲ್ಲಿ ಭಾಗಿಯಾಗಿದ್ದನ್ನು ನೆನೆಸಿಕೊಂಡು ಗದ್ಗಿತರಾದರು.

Share: