ಹುಬ್ಬಳ್ಳಿ: ವಿದ್ಯಾರ್ಥಿನಿ ಯೊಬ್ಬಳಿಗೆ ಮನಬಂದಂತೆ ಚಾಕುವಿನಿಂದ ಇರಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನಲ್ಲಿ ಗುರುವಾರ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಫಯಾಝ್ ಎಂಬಾತನನ್ನು ಬಂಧಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ (24) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಇಂದು ಪರೀಕ್ಷೆಗೆ ತೆರಳಿದ್ದ ವೇಳೆ ಅದೇ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದ ಫಯಾಝ್ 9 ಬಾರಿ ಚಾಕುವಿನಿಂದ ಇರಿದಿದ್ದನ್ನೆನ್ನಲಾಗಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಸಹಪಾಠಿಗಳು ಹಾಗೂ ಕಾಲೇಜಿನ ಉಪನ್ಯಾಸಕರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ನೇಹಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫಯಾಜ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ. ಆದರೆ ನೇಹಾ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನೂ ಕಿಮ್ಸ್ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.