ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಾಸಿಗೆ ಹಿಡಿದ ವಯೋವೃದ್ದರನ್ನು ಮನೆ ಭೇಟಿಯೊಂದಿಗೆ ಆರೈಕೆ ಮಾಡಿದ ಸಂಚಾರಿ ಆರೋಗ್ಯ ಘಟಕದ ವೈದ್ಯಕೀಯ ತಂಡ

ಹಾಸಿಗೆ ಹಿಡಿದ ವಯೋವೃದ್ದರನ್ನು ಮನೆ ಭೇಟಿಯೊಂದಿಗೆ ಆರೈಕೆ ಮಾಡಿದ ಸಂಚಾರಿ ಆರೋಗ್ಯ ಘಟಕದ ವೈದ್ಯಕೀಯ ತಂಡ

Thu, 11 Jan 2024 04:39:05  Office Staff   SO News

ಬಳ್ಳಾರಿ : ಹಾಸಿಗೆ ಹಿಡಿದ ವಯೋವೃದ್ಧರಿಗೆ ಸೂಕ್ತ ವೈದ್ಯಕೀಯ ಉಪಚಾರ ಕೈಗೊಳ್ಳುವ ಜವಾಬ್ದಾರಿಯನ್ನು ಪಾಲಕರಿಗೆ ತಿಳಿಸುತ್ತಾ, ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕದ ವೈದ್ಯಕೀಯ ತಂಡವು ಮನೆ ಭೇಟಿ ಮೂಲಕ ಉಪಚಾರ ಮಾಡಿ ಅಗತ್ಯ ಔಷಧಿಗಳನ್ನು ಸ್ಥಳದಲ್ಲಿಯೇ ಒದಗಿಸಿ ಮರು ಭೇಟಿಯೊಂದಿಗೆ ಸಾಂತ್ವನ, ಧೈರ್ಯ ಹೇಳುವ ಕಾರ್ಯ ಸಂಡೂರಿನ ವೈದ್ಯಕೀಯ ತಂಡದಿಂದ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಸಂಡೂರು ತಾಲ್ಲೂಕಿನ ಯಶವಂತನಗರ ಗ್ರಾಮದ ಮಾರೆಕ್ಕ ಎನ್ನುವ 70 ವರ್ಷದ ವಯೋವೃದ್ಧರು ಕಳೆದ ಒಂದು ವಾರದ ಹಿಂದೆ ಇನ್ನೊಬ್ಬರ ಸಹಾಯದಿಂದ ನಡೆದಾಡುತ್ತಿದ್ದ ಇವರು, ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದಿದ್ದು, ಹತ್ತಿರದ ಸಂಡೂರು ಆಸ್ಪತ್ರೆಗೆ ಹೋಗದೇ ಮನೆಯಲ್ಲಿ ಇರುವ ಕುರಿತು ಮಾಹಿತಿಯನ್ನು ಪ್ರತಿ ವಾರ ಯಶವಂತನಗರ ಗ್ರಾಮಕ್ಕೆ  ಆಗಮಿಸುವ ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕದ ವೈದ್ಯಕೀಯ ತಂಡವು ಪಡೆಯಿತು.

ಡಾ.ವಿಜಯಲಕ್ಷ್ಮೀ ತಕ್ಷಣವೇ ಮಾಹಿತಿ ದೊರೆತ ಕೂಡಲೆ ಸಿಬ್ಬಂದಿಯವರಾದ ಜ್ಯೋತಿ, ಚೈತ್ರಾ, ರಾಧಾ ಅವರೊಂದಿಗೆ ಮನೆ ಭೇಟಿ ತಪಾಸಣೆ ಕೈಗೊಂಡು ಪರೀಕ್ಷಿಸಿ ಕೆಮ್ಮಿಗೆ ಸಂಬಂಧಿಸಿದ ಔಷಧಿ ನೀಡಿ ಕುಟುಂಬ ಸದಸ್ಯರಿಗೆ ಆರೈಕೆ ಕುರಿತು ಮಾಹಿತಿ ನೀಡಿದ್ದಾರೆ. ಮನೆ ಬಾಗಿಲಿಗೆ ಬಂದು ಔಷಧಿ ನೀಡಿದ ವೈದ್ಯರಿಗೆ ಕುಟುಂಬದ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.

ಅಮೃತವಾಹಿನಿ: 2021 ಜನವರಿಯಲ್ಲಿ ಸಂಡೂರು ತಾಲೂಕಿನ 103 ಗ್ರಾಮಗಳಲ್ಲಿ ವೈದ್ಯಕೀಯ ಉಪಚಾರ, ಔಷಧಿ ಒದಗಿಸುವ ಉದ್ದೇಶದೊಂದಿಗೆ ತಾಲೂಕಿನಲ್ಲಿರುವ ನ್ಯಾಷನಲ್ ಮೈನಿಂಗ್ ಡೆವಲಪ್‍ಮೆಂಟ್ ಕಾರ್ಪೊರೇಷನ್ (ಎನ್‍ಎಮ್‍ಡಿಸಿ)ನ ಸಿಎಸ್‍ಆರ್ ಅನುದಾನಡಿಯಲ್ಲಿ  ಅಂಬ್ಯುಲೆನ್ಸ್‍ಗಳನ್ನೊಳಗೊಂಡ ಅಮೃತವಾಹಿನಿ ಹೆಸರಿನೊಂದಿಗೆ ಒಟ್ಟು 10 ಸಂಚಾರಿ ಆರೋಗ್ಯ ಘಟಕಗಳಿಗೆ ಸಂಡೂರು ಶಾಸಕ ಈ.ತುಕಾರಾಂ ಅವರು ನೀಡಿದ್ದರು.

ಅಮೃತವಾಹಿನಿ ವೈದ್ಯಕೀಯ ತಂಡದಲ್ಲಿ ವೈದ್ಯರು, ಔಷಧಿ ವಿತರಕರು, ಪ್ರಯೋಗಾಲಯ ತಂತ್ರಜ್ಞರು, ಶುಶ್ರೂಷಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಚಾಲಕ ಸೇರಿದಂತೆ ಒಟ್ಟು ಆರು ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ನಿರಂತರವಾಗಿ ಸಂಡೂರು ತಾಲೂಕಿನಲ್ಲಿ ವೈದ್ಯಕೀಯ ಸೇವೆಗಳು ಪ್ರತಿದಿನ ಒಂದು ಘಟಕವು ಎರಡು ಗ್ರಾಮಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದಂದು ಕ್ರಿಯಾ ಯೋಜನೆಯಂತೆ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.

 


Share: