ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸು.ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಗೆ ಸಿಜೆಐ ಛೀಮಾರಿ

ಸು.ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಗೆ ಸಿಜೆಐ ಛೀಮಾರಿ

Wed, 20 Mar 2024 07:12:28  Office Staff   Vb

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಕುರಿತು ತೀರ್ಪನ್ನು ಸ್ವಯಂಪ್ರೇರಿತವಾಗಿ ಮರುಪರಿಶೀಲಿಸುವಂತೆ ಕೋರಿ ಪತ್ರ ಬರೆದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷ ಹಾಗೂ ಹಿರಿಯ ವಕೀಲ ಆದೀಶ್ ಅಗರವಾಲ್ ಅವರಿಗೆ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು ಸೋಮವಾರ ಛೀಮಾರಿ ಹಾಕಿದರು.

ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ನೇತೃತ್ವವನ್ನು ವಹಿಸಿದ್ದ ನ್ಯಾ. ಚಂದ್ರಚೂಡ್, ಪ್ರಚಾರಕ್ಕಾಗಿ ಈ ಪತ್ರವನ್ನು ಬರೆದಿರುವಂತೆ ಕಾಣುತ್ತಿದೆ ಎಂದು ಹೇಳಿದರು. ನೀವು ಎಬಿಎ ಅಧ್ಯಕ್ಷರೂ ಆಗಿದ್ದೀರಿ ಎಂದು ಅವರು ಅಗರವಾಲ್‌ಗೆ ನೆನಪಿಸಿದರು.

ಮಾ.12ರಂದು ತನ್ನ ಮೊದಲ ಪತ್ರವನ್ನು ಭಾರತದ ರಾಷ್ಟ್ರಪತಿಗಳಿಗೆ ಬರೆದಿದ್ದ ಅಗರವಾಲ್, ಚುನಾವಣಾ ಬಾಂಡ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪಾಗಿದೆ ಮತ್ತು ಅದನ್ನು ರಾಷ್ಟ್ರಪತಿಗಳು ತಡೆಹಿಡಿಯಬೇಕು ಹಾಗೂ ಈ ವಿಷಯದಲ್ಲಿ ಸಂವಿಧಾನದ 143ನೇ ವಿಧಿಯಡಿ ರಾಷ್ಟ್ರಪತಿಗಳ ಉಲ್ಲೇಖವನ್ನು ಕೋರಬೇಕು ಎಂದು ಪ್ರತಿಪಾದಿಸಿದ್ದರು. ಇದರ ಬೆನ್ನಲ್ಲೇ ಎಸ್‌ಸಿಬಿಎ ಕಾರ್ಯಕಾರಿ ಸಮಿತಿಯು ಈ ಪತ್ರದಿಂದ ಅಂತರವನ್ನು ಕಾಯ್ದುಕೊಂಡಿತ್ತು. ಬಳಿಕ ಮಾ.14ರಂದು ಮು.ನ್ಯಾ.ಚಂದ್ರಚೂಡ್ ಅವರಿಗೆ ವೈಯಕ್ತಿಕವಾಗಿ ಪತ್ರವನ್ನು ಬರೆದಿದ್ದ ಅಗರವಾಲ್, ಚುನಾವಣಾ ಬಾಂಡ್ ತೀರ್ಪನ್ನು ಸ್ವಯಂಪ್ರೇರಿತವಾಗಿ ಮರುಪರಿಶೀಲಿಸುವಂತೆ ಅವರನ್ನು ಕೋರಿದ್ದರು.

ಆಗರವಾಲ್ ತನ್ನ ಪತ್ರವನ್ನು ಪೀಠದ ಎದುರು ಉಲ್ಲೇಖಿಸಲು ಮುಂದಾದಾಗ ನ್ಯಾ.ಚಂದ್ರಚೂಡ್, ನೀವು ಹಿರಿಯ ವಕೀಲರಾಗಿರುವ ಜೊತೆಗೆ ಎಸ್ ಸಿಬಿಎ ಅಧ್ಯಕ್ಷರೂ ಆಗಿದ್ದೀರಿ. ನನ್ನ ಸ್ವಯಂಪ್ರೇರಿತ (ಸುಮೊಟೊ) ಅಧಿಕಾರವನ್ನು ಬಳಸುವಂತೆ ಕೋರಿ ನೀವು ನನಗೆ ಪತ್ರ ಬರೆದಿದ್ದೀರಿ. ಇವೆಲ್ಲವೂ ಪ್ರಚಾರಕ್ಕೆ ಸಂಬಂಧಿಸಿವೆ. ನಾವು ಇದರಲ್ಲಿ ತೊಡಗಿಕೊಳ್ಳುವುದಿಲ್ಲ. ನಾನು ಹೆಚ್ಚು ಹೇಳುವಂತೆ ಮಾಡಬೇಡಿ ಅಗರವಾಲ್, ದಯವಿಟ್ಟು ಇದನ್ನು ಅಲ್ಲಿಗೇ ಬಿಡಿ. ಇಲ್ಲದಿದ್ದರೆ ನಾನು ಸ್ವಲ್ಪ ಅಸಹ್ಯಕರವಾದ ಹೆಚ್ಚಿನದನ್ನು ಹೇಳಬೇಕಾಗಬಹುದು ಎಂದು ಕಟುವಾಗಿ ನುಡಿದರು.


Share: