ನವದೆಹಲಿ, ನವೆಂಬರ್ 4: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ತಲೆದಂಡ’ ಆಗುವವರೆಗೂ ಪಟ್ಟು ಸಡಿಲಿಸುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.
ರಾಜ್ಯದ ಬಿಜೆಪಿ ಕಾರ್ಯಕರ್ತರ ಹಿತ ಕಾಪಾಡಲು ಒಳ್ಳೆಯ ನಾಯಕತ್ವದ ಅವಶ್ಯಕತೆ ಇದ್ದು, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೆ ನಡೆದ ಮಾತುಕತೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರಿಗೆ ನಾಯಕತ್ವ ಬದಲಾವಣೆ ಕುರಿತು ವಿವರಿಸಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷ ಉತ್ತಮ ನಾಯಕನನ್ನು ನೀಡಲಿದೆ ಎಂದು ನೂರಕ್ಕೆ ನೂರರಷ್ಟು ತಮಗೆ ವಿಶ್ವಾಸವಿದೆ ಎಂದಿದ್ದಾರೆ.
ಬಳ್ಳಾರಿ ಗಣಿಧಣಿಗಳೊಂದಿಗೆ ಮಾತುಕತೆ ನಡೆಸಿ ಸಂಧಾನ ಸೂತ್ರದ ಮೂಲಕ ಭಿನ್ನಮತ ಶಮನಗೊಳಿಸಿ ಎಂದು ರೆಡ್ಡಿಗಳ ಮಾತೃ ಸ್ವರೂಪಿ ಸುಷ್ಮಾ ಸ್ವರಾಜ್ ಅವರಿಗೆ ನಿನ್ನೆ ಬಿಜೆಪಿ ಹೊಣೆ ಹೊರಿಸಿತ್ತು. ಆದರೆ ಇಂದು ನಡೆದ ಸಂಧಾನ ವಿಫಲವಾಗಿದ್ದು, ಪಟ್ಟು ಸಡಿಲಿಸುವುದಿಲ್ಲ ಎಂದು ಬಂಡಾಯದ ಸಾರಥ್ಯ ವಹಿಸಿರುವ ಜನಾರ್ಧನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ: ಕನ್ನಡಪ್ರಭ