ಬೆಂಗಳೂರು, ಮೇ. ೧: ಇಎಸ್ಐ ಸೌಲಭ್ಯ ಪಡೆಯಲು ವೇತನ ಮಿತಿಯನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ ಆದೇಶ ಇಂದಿನಿಂದ ಜಾರಿಯಾಗಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಎಸ್ಐ ಸೌಲಭ್ಯ ಪಡೆಯಲು ಇದ್ದ ವೇತನ ಮಿತಿಯನ್ನು ೧೦ ಸಾವಿರ ರೂ ನಿಂದ ೧೫ ಸಾವಿರ ರೂಗಳಿಗೆ ವಿಸ್ತರಿಸಲಾಗಿದ್ದು, ಈ ಆದೇಶ ಕಾರ್ಮಿಕ ದಿನವಾದ ಇಂದಿನಿಂದ ಜಾರಿಗೆ ಬಂದಿದೆ ಎಂದು ಅವರು ಹೇಳಿದರು.
ಪ್ರದೇಶ ಕಾಂಗ್ರೆಸ್ ಕಛೇರಿಯಲ್ಲಿಂದು ನಡೆದ ಮೇ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಎಸ್ಐ ಸೌಲಭ್ಯ ಹೊಂದಿರುವ ಕಾರ್ಮಿಕ ಮೃತ ಪಟ್ಟರೆ ಅವರ ಕುಟುಂಬ ವರ್ಗದವರಿಗೆ ಇ.ಎಸ್.ಐ. ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಯಾವುದೇ ಸಂಸ್ಥೆಯ ಕಾರ್ಮಿಕರು ಇ.ಎಸ್.ಐ. ಸೌಲಭ್ಯ ಪಡೆಯಲು ಕನಿಷ್ಠ ೨೦ ಮಂದಿ ಕಾರ್ಮಿಕರು ಇರಬೇಕು ಎನ್ನುವ ಕಾನೂನನ್ನು ಸಡಿಲಿಸಿ ೧೦ ಜನ ಕಾರ್ಮಿಕರಿದ್ದರೂ ಇಎಸ್ಐ ಸೌಲಭ್ಯ ಕಲ್ಪಿಸಬೇಕು ಎನ್ನುವ ಕಾನೂನು ಜಾರಿ ಮಡಲಾಗಿದೆ ಎಂದರು.
ಇದಕ್ಕೂ ಮೊದಲು ಮೇ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಈ ಬಜೆಟ್ನಲ್ಲಿ ೧ ಸಾವಿರ ಕೋಟಿ ತೆಗೆದಿರಿಸಿದೆ ಎಂದರು.
ಕೇಂದ್ರದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿರ ಸಮಸ್ಯೆಗಳಿಗೆ ಸ್ವಂದಿಸುತ್ತಿರುವುದರಿಂದ ಕಾರ್ಮಿಕರ ಪ್ರತಿಭಟನೆಗಳು, ಮುಷ್ಕರಗಳು ಕಡಿಮೆಯಾಗಿವೆ ಎಂದು ತಿಳಿಸಿದರು.
ಕೇಂದ್ರದ ಯುಪಿಯ ಸರ್ಕಾರ ಕಳೆದ ೧೧ ತಿಂಗಳಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದ ಅವರು ಸಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ಹೇಳಿದರು.
ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ಎಲ್ಲಾ ಬಡವರಿಗೆ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು ಹೇಳಿ ಕೆಲಸ ಮಾಡುವಾಗ ಮೃತಪಟ್ಟ ಕಾರ್ಮಿಕರಿಗೆ ನೀಡುವ ಪರಿಹಾರ ದ್ವಿಗುಣ ಸೇರಿದಂತೆ ಸುಮಾರು ೬ ಕಲ್ಯಾಣ ಕಾರ್ಯಕ್ರಮಗಳನ್ನು ಕಾರ್ಮಿಕರಿಗಾಗಿ ಜಾರಿ ಮಾಡಲಾಗಿದೆ ಎಂದರು.
ಇದೇ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ರೈಲ್ವೆ ಇಲಾಖೆ ತನ್ನ ಕಾರ್ಮಿಕರ ಕಾರ್ಮಿಕರ ಕಾಯ್ದೆ ಅನ್ವಯ ಕಲ್ಯಾಣ ಕಾರ್ಯಕ್ರಮ ಜಾರಿಮಾಡಿದೆ ಎಂದರು.
ಇಲಾಖೆಯ ಕಾರ್ಮಿಕರ ಮಕ್ಕಳಿಗಾಗಿ ಮೈಸೂರಿನಲ್ಲಿ ವೈದ್ಯಕೀಯ ಕಾಲೇಜು ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜ್ನ್ನು ರೈಲ್ವೆ ಇಲಾಖೆ ಶೀಘ್ರದಲ್ಲೇ ಆರಂಭಿಸಲಿದೆ ಎಂದರು.