ಭಟ್ಕಳ, ಜನವರಿ ೩೦:ಇಲ್ಲಿನ ಜಾಲಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಗಳು ಡಾಂಬರಿಕರಣಗೊಳ್ಳುತ್ತಲಿದ್ದು ಅದು ಕಳಪೆ ಮಟ್ಟದ್ದಾಗಿದೆ ಎಂದು ಆರೋಪಿಸಿದ ಯುವಕರು ಕಾಮಗಾರಿಯನ್ನು ತಡೆದು ಪ್ರತಿಭಟಸಿದ ಘಟನೆ ನಡೆದಿದೆ.
ಜಾಲಿ ರಸ್ತೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ರಸ್ತೆಯಲ್ಲಿನ ಹೊಂಡಕ್ಕೆ ಡಾಂಬರು ಹಾಕದೇ ಬರೀ ಜಲ್ಲಿಯನ್ನು ತುಂಬಿ ರೋಲ್ ಹೊಡೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯುವಕರು ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಸಿ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಬಂದು ಕಾಮಗಾರಿಯನ್ನು ವೀಕ್ಷಿಸಬೇಕು ಎಂದು ಒತ್ತಾಯಿಸಿದರು. ಜಾಲಿ ರಸ್ತೆಯಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಳಪೆಯಾಗಿದೆ ಎಂದು ಆರೋಪಿಸಿ ಯುವಕರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೂ ಸಹ ಮನವಿಯೊಂದನ್ನು ನೀಡಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.