ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ದಶಕದ ಬಳಿಕ ಮರುಪ್ರಾರಂಭಗೊಳ್ಳಲಿರುವ ಗೋಜಾತ್ರೆ

ಹಾಸನ: ದಶಕದ ಬಳಿಕ ಮರುಪ್ರಾರಂಭಗೊಳ್ಳಲಿರುವ ಗೋಜಾತ್ರೆ

Mon, 14 Dec 2009 03:12:00  Office Staff   S.O. News Service
ಹಾಸನ, ಡಿ.12:ಕಳೆದೊಂದು ದಶಕದಿಂದ ಸ್ಥಗಿತಗೊಂಡಿದ್ದ ಹಾಸನ ತಾಲ್ಲೂಕಿನ ಗೊರೂರಿನ ಶ್ರೀ ಯೋಗನರಸಿಂಹಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ದನಗಳ ಜಾತ್ರೆಯನ್ನು ಈ ಬಾರಿ ಅದ್ದೂರಿಯಾಗಿ ನಡೆಸಲು ದೇವಾಲಯ ಸಮಿತಿ ತೀರ್ಮಾನಿಸಿದೆ.
 
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೊರೂರಿನ ಯೋಗನರಸಿಂಹಸ್ವಾಮಿ ದೇವಾಲಯ ಸಮಿತಿಯ ಸಂಚಾಲಕ ಎಸ್.ಟಿ. ವಿಜಯ ಸಾರಥಿ, ೪೦೦ ವರ್ಷಗಳ ಇತಿಹಾಸ ಇರುವ ಶ್ರೀ ಯೋಗಾನರಸಿಂಹಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ಹಿಂದೆ ವೈಭವದಿಂದ ದನಗಳ ಜಾತ್ರೆಯನ್ನು ನಡೆಸಲಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಕಳೆದ ೧೦ ವರ್ಷಗಳಿಂದ ದನಗಳ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದರು.
 
ಈ ಬಾರಿ ಗೊರೂರು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರುಗಳ ಅಭಿಪ್ರಾಯವನ್ನು ಪಡೆದು ದನಗಳ ಜಾತ್ರೆಯನ್ನು ಹಿಂದಿನ ವೈಭವವನ್ನು ಮರುಕಳಿಸುವಂತೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
 
ಜಾತ್ರೆಗೆ ಬರುವ ಎಲ್ಲಾ ಜಾನುವಾರುಗಳಿಗೆ ಉಚಿತವಾಗಿ ಉಲ್ಲು ನೀರು  ಒದಗಿಸಲಾಗುವುದು. ಅಲ್ಲದೇ ಸಮರ್ಪಕ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ಜಾತ್ರೆಗೆ ಬರುವ ರಾಸುಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸದಂತೆ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
 
ಅತ್ಯುತ್ತಮ ರಾಸುಗಳಿಗೆ ವಿಶೇಷ ಬಹುಮಾನ ನೀಡುವ ಜೊತೆಗೆ ಜಾತ್ರೆಗೆ ಬರುವ ಎಲ್ಲಾ ರಾಸುಗಳ ಮಾಲೀಕರಿಗೆ ಅಭಿನಂದನಾ ಪತ್ರ ನೀಡಲಾಗುವುದೆಂದು ತಿಳಿಸಿದರು.
ಜನವರಿ ೧೪ ರಿಂದ ೨೫ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ೨೨ ರಂದು ಯೋಗಾನರಸಿಂಹಸ್ವಾಮಿಯ ದಿವ್ಯ ರಥೋತ್ಸವ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ  ಗೊರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಣ್ಣ, ಶ್ರೀಯೋಗನರಸಿಂಹಸ್ವಾಮಿ ದೇವಸ್ಥಾನ ಸಮಿತಿಯ ಧರ್ಮದರ್ಶಿ ಹೇಮರಾಜು, ಗುತ್ತಿಗೆದಾರ ಸತ್ಯಪ್ರಕಾಶ್ ಉಪಸ್ಥಿತರಿದ್ದರು.


Share: