ಭಟ್ಕಳ, ಮಾರ್ಚ್ 9: ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಕಾರ್ಯವೇ ಸತ್ಕಾರ್ಯವಾಗಿದ್ದು, ಇದರಿಂದ ಘನ ವ್ಯಕ್ತಿತ್ವ ರೂಪಗೊಳ್ಳುವುದರೊಂದಿಗೆ ಸಮಾಜವೂ ಏಳಿಗೆ ಹೊಂದುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಹೇಳಿದ್ದಾರೆ.
ಅವರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳಿವೆಕೋಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಮಹಾದ್ವಾರ ಹಾಗೂ ನೂತನ ಅತಿಥಿಗೃಹದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು. ಮನುಷ್ಯನಿಗೆ ದೈವ ಹಾಗೂ ಧರ್ಮ ಪ್ರಜ್ಞೆ ಇರಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು ದುರ್ಗಾಪರಮೇಶ್ವರಿ ದೇವಾಲಯದ ವತಿಯಿಂದ ನಡೆಯುವ ವಿವಿಧ ಸೇವೆಗಳ ಸಾಲಿನಲ್ಲಿ ಸುತ್ತಮುತ್ತಲಿನ ರೋಗಿಗಳು ಔಷಧಿಯನ್ನು ಪಡೆಯುವ ಅವಕಾಶವನ್ನು ಪಡೆಯುವಂತಾಗಲಿ ಎಂದು ಹಾರೈಸಿದರು. ದೇವಸ್ಥಾನದ ಹಿರಿಯ ಅರ್ಚಕ ಗೋವರ್ಧನ ಅನಂತ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮದರ್ಶಿಗಳ ವತಿಯಿಂದ ಉದ್ಯಮಿ ಡಿ.ಜೆ.ಕಾಮತ್ ಹಾಗೂ ವೆಂಕಟೇಶ ಪ್ರಭು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ ನಾರಾಯಣ ಗಣಪತಿ ದೈಮನೆ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಇದರ ಅಧ್ಯಕ್ಷ ಶಿವಾನಂದ ನಾಯ್ಕ, ದೇವಸ್ಥಾನ ಆಡಳಿತ ಮಂಡಳಿಯ ಧರ್ಮದರ್ಶಿ ರಾಮನಾಥ ವಿಠೋಬ ಪೈ, ಹನುಮಂತ ಮಂಜಪ್ಪ ನಾಯ್ಕ, ನಾರಾಯಣ ಬೆರ್‍ಮ ಮೊಗೇರ, ತಿಮ್ಮಪ್ಪ ನಾರಾಯಣ ದೈಮನೆ, ನಾರಾಯಣ ಗಣಪತಿ ದೈಮನೆ, ಆರ್.ಆರ್.ಕಾಮತ್, ವೆಂಕಟ್ರಮಣ ಮಲ್ಲಜ್ಜ ಅಳಿವೇಕೋಡಿ, ಎಸ್.ಜಿ.ಅಳಿವೇಕೋಡಿ, ವೆಂಕಟ್ರಮಣ ಮೊಗೇರ ಗುಬ್ಬಿಹಿತ್ಲು, ಶ್ರೀಪಾದ್ ಕಾಮತ್ ಮುರುಡೇಶ್ವರ, ರಾಮಾ ನಾಯ್ಕ ಸಾರದಾ ಹೊಳೆ, ಭೈರಾ ಮೊಗೇರ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗಗಳ ದೇವಸ್ಥಾನದ ವತಿಯಿಂದ ಬಂದ ೩೦ಕ್ಕೂ ಅಧಿಕ ಧರ್ಮದರ್ಶಿಗಳು ಹಾಗೂ ಸ್ಥಳೀಯ ಅರ್ಚಕ ವರ್ಗವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗುರುಪರಂಪರೆ ಈ ದೇಶದ ಸಂಸ್ಕೃತಿ: ಶಿವಾನಂದ ನಾಯ್ಕ
ಭಾರತವು ಜಗತ್ತಿನಲ್ಲಿಯೇ ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶವಾಗಿದ್ದು, ಗುರುವಿಗೆ ತಲೆ ಬಾಗಿ ನಡೆಯುವುದು ಈ ದೇಶದ ಸಂಸ್ಕೃತಿಯಾಗಿ ಉಳಿದುಕೊಂಡಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಶಿವಾನಂದ ನಾಯ್ಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮ ವಿಶಾಲವಾಗಿದೆ. ಧಾರ್ಮಿಕ ಶ್ರದ್ಧೆಯಿಂದಾಗಿ ಅಳಿವೇಕೋಡಿ ಕ್ಷೇತ್ರವು ಉಳಿದವರಿಗೆ ಮಾದರಿಯಾಗಿ ರೂಪುಗೊಂಡಿದೆ ಎಂದ ಅವರು ಸಾಂಘಿಕ ಪ್ರಯತ್ನದ ಅವಶ್ಯಕತೆಯನ್ನು ವಿವರಿಸಿದರು.
.