ಕಾರವಾರ, ಅಕ್ಟೊಬರ್ 13: ಇತ್ತೀಚಿನ ನೆರೆಹಾವಳಿಯಿಂದ ತತ್ತರಿಸಿರುವ ಹಲವು ಗ್ರಾಮಗಳಿಗೆ ಕರಾವಳಿ ವಲಯದ ಜಮಾತೆ ಇಸ್ಲಾಮಿ ಹಿಂದ್ ತಂಡ ಭೇಟಿ ನೀಡಿತು.
ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹೆಚ್. ಆರ್ ಎಸ್. (ಹ್ಯೂಮನಿಟೇರಿಯನ್ ರಿಲೀಫ್ ಸೊಸೈಟಿ) ಕರಾವಳಿ ವಯಲದ ನಾಯಕರಾದ ಯು.ಅನ್ವರ್ ಅಲಿ ಕಾಪು ರವರ ನೇತೃತ್ವದಲ್ಲಿ ಹದಿಮೂರು ಸದಸ್ಯರ ತಂಡ ಕಾರವಾರ ಸಮೀಪದ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿತು.

ಕಾರವಾರದಿಂದ ಸುಮಾರು ಇಪ್ಪತ್ತೈದು ಕಿ.ಮೀ. ದೂರವಿರುವ ರಾಣೆವಾಡ, ಚಂದ್ಯ, ಕದ್ವಾಡ, ಮಾದಿಭಾಗ್, ಮಾಜಳ್ಳಿ, ಕೊಟ್ಟಾರ, ಮೂಡಿಗೆರೆ, ಹಳೆಕೋಟೆ, ಶಿರವಾಡ, ಮುಮೀನ್ ಬಾಗ್, ಸುಭಾಸ್ ನಗರ, ಕಾಜಿಬಾಗ್, ಜೀಲ್ವಾಡಾ, ಕೋಡಿಬೀರ್ ದೇವಸ್ಥಾನದ ಮೊದಲಾದ ಹಳ್ಳಿ-ಪ್ರದೇಶಗಳಿಗೆ ಭೇಟಿ ನೀಡಿ ನೆರೆಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನವನ್ನು ನೀಡಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳನ್ನು ಸಂದರ್ಶಿಸಿ ನಷ್ಟದ ಅಂದಾಜು ಮಾಡಲಾಗಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ದಿನಬಳಕೆಯ ಸಾಮಾಗ್ರಿಯನ್ನು ಖರೀದಿಸಿ ವಿತರಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಸಂತ್ರಸ್ತ ಪ್ರದೇಶದಲ್ಲಿ ಬೀಡು ಬಿಟ್ಟಿರುವ ತಂಡದ ಸದಸ್ಯರು ಕೇವಲ ಸಾಂತ್ವಾನ ವ್ಯಕ್ತಿಪಡಿಸದೇ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯದಲ್ಲಿ ಅಬ್ದುಲ್ ರಹಮಾನ್ ಜಪ್ಪು, ಎಮ್.ಹೆಚ್. ಅಬ್ದುಲ್ ಶುಕೂರ್, ಮುಹಮ್ಮದ್ ಮರಾಕದಾ, ಎಂ. ಶಬ್ಬೀರ್ ಮಲ್ಪೆ, ಜುಬೇರ್ ಮೌಲಾನಾ, ನೂರುಲ್ಲಾ ಅಸ್ಸಾದಿ ಭಟ್ಕಳ, ಯಹ್ಯಾ ರುಕ್ನುದ್ದೀನ್, ಕಮರುದ್ದೀನ್ ಭಟ್ಕಳ್, ಜಿಯಾವುರ್ರಹ್ಮಾನ್, ನಸೀಫ್ ಇಕ್ಕೇರಿ, ಫಾರೂಕ್ ಮಾಸ್ಟರ್ ಮೊದಲಾದವರು ತಂಡದಲ್ಲಿದ್ದು ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಕಾರವಾರದ ಸ್ಥಳೀಯ ಸದಸ್ಯರಾದ ಅಬ್ದುಲ್ ಖಯ್ಯೂಮ್, ಖಲೀಲ್ ಸಾಹೇಬ್, ಎಸ್. ಎ. ಖಾಜಿ ಅಡ್ವೋಕೇಟ್, ಸುರೇಖಾ, ಶ್ರೀ ಭೋರ್ಕರ್ (ಹೋಟೆಲ್ ಸಾಯಿ ಇಂಟರ್ ನ್ಯಾಶನಲ್ ಮಾಲಿಕರು) ಮೊದಲಾದವರು ತಂಡದ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ.