ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು : ಯೇನೆಪೋಯ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಮೌಲಾನ ಅಬುಲ್ ಕಲಾಂ ಆಝಾದ್ ಮಹಾನ್ ರಾಷ್ಟ್ರೀಯವಾದಿ: ಪ್ರೊ.ಬಿ.ಶೇಖ್ ಅಲಿ

ಮಂಗಳೂರು : ಯೇನೆಪೋಯ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಮೌಲಾನ ಅಬುಲ್ ಕಲಾಂ ಆಝಾದ್ ಮಹಾನ್ ರಾಷ್ಟ್ರೀಯವಾದಿ: ಪ್ರೊ.ಬಿ.ಶೇಖ್ ಅಲಿ

Thu, 12 Nov 2009 03:08:00  Office Staff   S.O. News Service
ಮಂಗಳೂರು, ನ.11: ಸ್ವಾತಂತ್ರ ಹೋರಾಟಗಾರ ಭಾರತದ ಪ್ರಥಮ ಶಿಕ್ಷಣ ಸಚಿವ ಡಾ. ಮೌಲಾನಾ ಅಬುಲ್ ಕಲಾಂ ಆಝಾದ್ ಮಹಾನ್ ರಾಷ್ಟ್ರೀಯವಾದಿಯಾಗಿದ್ದರು ಎಂದು ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಬಿ. ಶೇಖ್‌ಅಲಿ ನುಡಿದರು. 
12-mng3.jpg
ಅವರು ಇಂದು ದೇರಳಕಟ್ಟೆ ಯೇನೆಪೋಯ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಯೇನೆಪೋಯ ಫೌಂಡೇಶನ್‌ನ ವತಿಯಿಂದ ಹಮ್ಮಿಕೊಂಡ ವಿಶೇಷ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 

ಮೌಲಾನ ಅಬುಲ್ ಕಲಾಂ ಆಝಾದ್ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯ ನಿಕಟವರ್ತಿಗಳಾಗಿ ಸಮಗ್ರ ಭಾರತದ ಸ್ವಾತಂತ್ರಕ್ಕಾಗಿ ಭಾರತದ ವಿಭಜನೆಯ ಸಂದರ್ಭದಲ್ಲೂ ಗಾಂಧೀಜಿಯ ನಿಲುವಿಗೆ ಸಹಮತ ಹೊಂದಿದವರಾಗಿದ್ದರು. ಮಣ್ಣಿನ ಮಗನಾಗಿ ಈ ದೇಶದ ಸಮಗ್ರತೆ, ಐಕ್ಯತೆ, ಭಾರತದ ಸಾರ್ವಭೌಮ ಸ್ವಾತಂತ್ರವನ್ನು ಪ್ರೀತಿಸಿದ ಕಲಾಂದೇಶದ ಪ್ರಥಮ ಶಿಕ್ಷಣ ಸಚಿವರಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಸ್ಲಾಂ ಧರ್ಮದ ನೈಜ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಅಬುಲ್ ಕಲಾಂ ಆಝಾದ್, ರಾಜಕೀಯ ಹಾಗೂ ಧಾರ್ಮಿಕ ಸಮನ್ವಯತೆಯನ್ನು ಕಾಯ್ದುಕೊಂಡರು. ತಮ್ಮ ವೈಚಾರಿಕ ಹಾಗೂ ಜಾತ್ಯತೀತ ನಿಲುವಿನಿಂದ ಶಿಕ್ಷಣ ಸಚಿವರಾಗಿ ಜನಮನ್ನಣೆಗೆ ಪಾತ್ರರಾದ ಮಹಾನ್ ಮೇಧಾವಿ ಕಲಾಂ ಈ ದೇಶಕ್ಕೊಬ್ಬ ಮಾದರಿ ಸಚಿವರಾಗಿದ್ದರು ಎಂದು ಶೇಖ್ ಅಲಿ ತಿಳಿಸಿದರು. ಯೇನೆಪೋಯ ವಿಶ್ವವಿದ್ಯಾನಿಲಯ ದೇಶದಲ್ಲೆ ನಾಲ್ಕನೆ ಮುಸ್ಲಿಂ ಸಮುದಾಯದವರಿಂದ ಸ್ಥಾಪನೆಯಾದ ವಿಶ್ವವಿದ್ಯಾನಿಲಯವಾಗಿದ್ದು, ಇದು ಕ್ಷಿಪ್ರವಾಗಿ ಬೆಳವಣಿಗೆ ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ಶೇಖ್ ಅಲಿ ಶ್ಲಾಘಿಸಿದರು. 


ಹಾಜಬ್ಬ, ಶೇಖ್ ಅಲಿಗೆ ಸನ್ಮಾನ
12-mng4.jpg
12-mng5.jpg 
ಯೇನೆಪೋಯ ಫೌಂಡೇಶನ್ ವತಿಯಿಂದ ಸರಕಾರಿ ಶಾಲೆ ನಿರ್ಮಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಹಾಜಬ್ಬ ಅವರ ಮೂಲಕ ೫೦೦೦೦ ರೂ.ಗಳನ್ನು ಹರೇಕಳ ಪ್ರಾಥಮಿಕ ಶಾಲೆಗೆ ದೇಣಿಗೆಯಾಗಿ ಯೇನೆಪೋಯ ಕುಲಪತಿ ಅಬ್ದುಲ್ಲಾ ಕುಂಞಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿ ಹಾಗೂ ಗೋವಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ರಾಜ್ಯೋತ್ಸವ ಪುರಸ್ಕೃತ ಪ್ರೊ.ಬಿ. ಶೇಖ್ ಅಲಿಯವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. 

ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವದ ಬಗ್ಗೆ ವಿವರಿಸಿದ ಯೇನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಸಯ್ಯದ್ ಅಖೀಲ್ ಅಹ್ಮದ್ ಮಾತನಾಡಿ, ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಡಾ. ಮೌಲಾನಾ ಅಬುಲ್ ಕಲಾಂ ಆಝಾದ್ ದೂರದೃಷ್ಟಿ ಹೊಂದಿದ್ದ ಶಿಕ್ಷಣ ಪ್ರೇಮಿಯಾಗಿದ್ದರು. 


ಹಿಂದೂ- ಮುಸ್ಲಿಂ ಸುಮಧುರ ಬಾಂಧವ್ಯಕ್ಕೆ ಶ್ರಮಿಸಿದ ಭಾರತದ ಶೈಕ್ಷಣಿಕ ಪ್ರಗತಿಯ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದರು. ಕಲಾಂ ಅವರ ಮುಂದಾಲೋಚನೆಯ ಪರಿಣಾಮವಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಯುಜಿಸಿ, ಐ‌ಐಟಿ ಸ್ಥಾಪನೆಯಾಯಿತು ಎಂದು ಅಖೀಲ್ ಅಹ್ಮದ್ ತಿಳಿಸಿದರು. 

ಸಮಾರಂಭದಲ್ಲಿ ಯೇನೆಪೋಯ ಫೌಂಡೇಶನ್ ವತಿಯಿಂದ ಐದು ಎಂಬಿಬಿ‌ಎಸ್ ಹಾಗೂ ಐದು ಬಿಡಿ‌ಎಸ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಪ್ರಮಾಣ ಪತ್ರ ವಿತರಿಸಲಾಯಿತು. 

ಸಮಾರಂಭದಲ್ಲಿ ಯೇನೆಪೋಯ ಫೌಂಡೇಶನ್‌ನ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಸ್ವಾಗತಿಸಿದರು. 

ಕುಲಪತಿ ಯೇನೆಪೋಯ ಅಬ್ದುಲ್ಲಾ ಕುಂಞಿ ಉಚಿತ ಎಂಬಿಬಿ‌ಎಸ್ ಹಾಗೂ ಬಿಡಿ‌ಎಸ್ ಪದವಿ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರೊ. ಪಿ.ಸಿ.ಎಂ. ಕುಂಞಿ, ಕುಲಸಚಿವ ಡಾ. ರವಿವಾಸ್ವಾನಿ, ಸಲಹೆಗಾರ ಡಾ. ಅಬ್ದುಲ್ ರೆಹಮಾನ್, ಆಯ್ಕೆ ಸಮಿತಿ ಸದಸ್ಯರಾದ ಎಂ.ಬಿ. ಅಬ್ದುಲ್ ರಹಮಾನ್, ಪ್ರೊ.ಎನ್. ಇಸ್ಮಾಯಿಲ್, ಬಿ.ಎಸ್. ಇಬ್ರಾಹಿಂ ಉಪಸ್ಥಿತರಿದ್ದರು.

Share: