ಭಟ್ಕಳ, ಡಿಸೆಂಬರ್ 28: ನಗರದ ಮದೀನಾ ಕಾಲೋನಿ ನಿವಾಸಿ ಮುಹಮ್ಮದ್ ಮೀರಾಂ ಮೆಕ್ಯಾನಿಕ್ (55) ಎಂಬುವರು ನಿನ್ನೆ ರಾತ್ರಿ ಭಟ್ಕಳ ರೈಲ್ವೇ ನಿಲ್ದಾಣದಿಂದ ಹಿಂದಿರುಗುತ್ತಿದ್ದಾಗ ಮುಸುಕುಧಾರಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.
ತಲೆಗೆ ತೀವ್ರತರದ ಗಾಯವಾಗಿದ್ದು ಕೂಡಲೇ ಅವರನ್ನು ನಗರದ ವೆಲ್ಫೇರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಮ್ಮ ಮಗನನ್ನು ರೈಲಿಗೆ ಹತ್ತಿಸಿ ಹಿಂದಿರುಗುತ್ತಿದ್ದಾಗ ಆಘಾತ ನಡೆಸಿದ ಮುಸುಕುಧಾರಿಯ ಉದ್ದೇಶ ಸ್ಪಷ್ಟವಾಗಿಲ್ಲದ ಕಾರಣ ಪ್ರಕರಣ ಕುತೂಹಲಕಾರಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನರು ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಕೂಡಲೇ ಆಸ್ಪತ್ರೆಗೆ ಧಾವಿಸಿದ ಭಟ್ಕಳ ನಗರ ಪಿ.ಎಸ್.ಐ. ಮಂಜುನಾಥ ನಾಯಕ್ ಹಾಗೂ ಇನ್ನಿತರ ಪೋಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆಯುವಲ್ಲಿ ಶ್ರಮಿಸುತ್ತಿದ್ದಾರೆ.
ಈ ಹಲ್ಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲದಿರುವುದು ಹೆಚ್ಚಿನ ಊಹಾಪೋಹಗಳಿಗೆ ದಾರಿಮಾಡಿದೆ. ಭಟ್ಕಳ ರೈಲ್ವೇ ನಿಲ್ದಾಣದಿಂದ ಹಲವು ರೈಲುಗಳು ರಾತ್ರಿ ವೇಳೆ ಸಂಚರಿಸುತ್ತಿದ್ದು ಪ್ರಯಾಣಿಕರ ಸಂಬಂಧಿಕರು ಅವರಿಗೆ ವಿದಾಯ ಹೇಳಿ ಹಿಂದಿರುಗುವ ವೇಳೆ ಮುಸುಕುಧಾರಿಯಿಂದ ಮತ್ತೊಂದು ಆಕ್ರಮಣಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ.