ಭಟ್ಕಳ, ಮಾರ್ಚ್ 11: ಮುರ್ಡೇಶ್ವರದ ಡಾ. ಹರಿಪ್ರಸಾದ ಕಿಣಿಯವರ ಮನೆಗೆ ಭೇಟಿ ನೀಡಿದ್ದ ಖ್ಯಾತ ಸಾಹಿತಿ ಹಾಗೂ ಗೀತ ರಚನಾಕಾರ ಜಯಂತ ಕಾಯ್ಕಿಣಿಯವರನ್ನು ಮುರ್ಡೇಶ್ವರ ಲಯನ್ಸ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಯ್ಕಿಣಿಯವರು ವಿಜ್ಞಾನವೆಂಬುದು ಒಂದು ಕಲೆಯಾಗಿದೆ. ನಾಡಿನ ಅನೇಕ ಸಾಹಿತಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಪರಿಣಿತಿಯನ್ನೂ ಹೊಂದಿದ್ದಾರೆ. ಸಾಹಿತ್ಯ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಪ್ರಸ್ತುತ ದಿನಗಳಲ್ಲಿ ಕಲೆ, ಸಾಹಿತ್ಯ ಹಾಗೂ ವಿಜ್ಞಾನಗಳ ಪೂರಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಯಕ್ಷರಕ್ಷೆಯ ಅಧ್ಯಕ್ಷ ಡಾ. ಐ ಆರ್ ಭಟ್‌ರವರು ಜಯಂತ ಕಾಯ್ಕಿಣಿಯವರಿಗೆ ಖ್ಯಾತ ಸಾಹಿತಿ ದಿ. ಮಾಳ್ಕೋಡ ನಾರಾಯಣ ಹೆಗಡೆ (ಮಾನಾ)ಯವರು ರಚಿಸಿದ ಕೆಲವು ಕೃತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಲಯನ್ಸ ಕ್ಲಬ್‌ನ ಪದಾಧಿಕಾರಿಗಳಾದ ಎಂ.ವಿ.ಹೆಗಡೆ,ಡಾ.ಸುನಿಲ್ ಜತ್ತನ್, ಡಾ.ವಾದಿರಾಜ ಭಟ್, ರಾಮದಾಸ ಶೇಟ್, ಮಂಜುನಾಥ ಕೆರೆಕಟ್ಟೆ, ವಿಶ್ವನಾಥ ಕಾಮತ್, ಫಿಲಿಫ್ ಅಲ್ಮೇಡಾ ಹಾಗೂ ನಿವೃತ್ತ ಶಿಕ್ಷಕಿ ವನಮಾಲಾ ಹೆಗಡೆ, ಶಿಕ್ಷಕಿ ವನಿತಾ ಹೆಗಡೆ,ಯೋಗೀಶ ಹೆಗಡೆ, ರಾಘವೇಂದ್ರ ಗಾಯ್ತೊಂಡೆ ಮುಂತಾದವರು ಉಪಸ್ಥಿತರಿದ್ದರು.