ಭಟ್ಕಳ, ಅಕ್ಟೋಬರ್ 15: ಈ ಮೊಬೈಲ್ ತಂದ ಗಮ್ಮತ್ತು, ಆಪತ್ತು, ಕರಾಮತ್ತು ಯಾರಿಗೂ ಹೊಸದಲ್ಲ ಬಿಡಿ. ಮೆಸೇಜ್ ಕಳುಹಿಸಿ, ಮಿಸ್ ಕಾಲ್ ಕೊಟ್ಟು ಹಳ್ಳಕ್ಕೆ ಬಿದ್ದ ಹುಡುಗಿಯರಂತೆ, ಪೋನ್ ಕರೆ ಮಾಡುತ್ತಲೇ ಕಿಸೆ ಬರಿದು ಮಾಡಿಕೊಂಡು, ಅಲ್ಲಿ ಇಲ್ಲಿ ಲವ್ ಮಾಡಿ... ಭಗ್ನ ಪ್ರೇಮಿಯಾಗಿ.. ಕೊನೆಗೆ ಮೊಬೈಲನ್ನೂ ಮಾರಿ ತಮ್ಮ ಹಳ್ಳವನ್ನು ತಾವೇ ತೋಡಿಕೊಂಡ ಹುಡುಗರೂ ನಮ್ಮಲ್ಲಿ ಸಾಕಷ್ಟಿದ್ದಾರೆ. ಇದಕ್ಕೊಂದು ಜೋಡಣೆ ಎಂಬಂತೆ ಬೆಂಗಳೂರು ಯುವಕನೋರ್ವ ಹುಡುಗಿಯನ್ನು ಹೋಲುವ ಧ್ವನಿಯನ್ನು ಹೊಂದಿರುವ ಭಟ್ಕಳದ ಯುವಕನೊಂದಿಗೆ ಅದ್ಹೇಗೋ ಸೃಷ್ಟಿಯಾದ ಮೊಬೈಲ್ ಸಂಪರ್ಕವನ್ನು ಮುಂದುವರೆಸಿಕೊಂಡು, ಮನದ ಬಯಕೆ ತೀರಿಸಿಕೊಳ್ಳಲು ಭೇಟಿಯಾಗಲು ಬಂದು ಕಾಲು ಜಾರಿ ಬಿದ್ದ ಘಟನೆ ಬುಧವಾರ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಜಾಲಿಯವನಾದ ಹೆಣ್ಣು ಧ್ವನಿಯ ಹುಡುಗ ಎಮ್‌ಇ(ಅಕ್ಷರವನ್ನು ಕಡಿತಗೊಳಿಸಲಾಗಿದೆ-೧೯ವರ್ಷ) ಕಳೆದ ಏಳು ತಿಂಗಳುಗಳಿಂದ ಬೆಂಗಳೂರಿನವನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ತನ್ನ ಹೆಸರನ್ನೂ ಮರೆ ಮಾಚಿರುವ ವಿಷಯ ಬೆಳಕಿಗೆ ಬಂದಿದೆ. ಈ ಅವಧಿಯಲ್ಲಿಯೇ ನೂರೆಂಟು ಕನಸನ್ನು ಕಾಣುತ್ತ ದಿನಗಳೆದ ಬೆಂಗಳೂರಿನವನು ಆಸೆ ಅದುಮಿಟ್ಟುಕೊಳ್ಳಲಾಗದೇ ಭೇಟಿಯಾಗುವ ಪ್ರಸ್ತಾಪ ಇರಿಸಿದ್ದ ಎನ್ನಲಾಗಿದೆ. ಇದಕ್ಕೆ ಭಟ್ಕಳದ ಎಮ್‌ಇ ಒಪ್ಪುತ್ತಿದ್ದಂತೆಯೇ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಜಿಗಿದಾಡಿದ ಈತ ಬುಧವಾರ ಭಟ್ಕಳಕ್ಕೆ ಬಂದು ಭಟ್ಕಳ ಶಹರ ವ್ಯಾಪ್ತಿಯಲ್ಲಿರುವ ಲಾಡ್ಜವೊಂದರಲ್ಲಿ ತಂಗಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ತನ್ನ ಪ್ರಿಯತಮನನ್ನು(!) ಭೇಟಿಯಾಗಲು ಎಮ್‌ಇ ಬುಧವಾರ ಬುರುಕಾ ಧರಿಸಿ ನಡೆದಿದ್ದು, ಬುರುಕಾದೊಳಗಿಂದ ಮುಖ ನೋಡಿದ ಬೆಂಗಳೂರು ಹೈರಾಣಾಗಿ ಹೋಗಿದ್ದಾನೆ. ಮುಖ ಮರೆಸಿಕೊಂಡು ಕೂಡಲೇ ರೂಮ್ ಖಾಲಿ ಮಾಡಿ ಓಟಕ್ಕಿತ್ತ ಆತ ನಂತರ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಬುರುಕಾ ಧರಿಸಿ ಬಂದಿದ್ದ ಎಮ್‌ಇ ಕಳೆಗುಂದಿ ಹೋಗಿದ್ದು, ಮುರುಡೇಶ್ವರ ಬಸ್ತಿಯವರೆಗೆ ಪ್ರಯಾಣ ಬೆಳೆಸಿ ಅಲ್ಲಿಯೇ ಮರೆಯಲ್ಲಿ ನಿಂತು ಬುರುಕಾ ಕಳಚಿಡಲು ಪ್ರಯತ್ನಿಸುತ್ತಿದ್ದಂತೆಯೇ ದಾರಿ ಹೋಕರಾರೋ ನೋಡಿ ಜನರನ್ನು ಸೇರಿಸಿದ್ದಾರೆ. ಊರಿಗೆ ಅಪಾಯ ಕಾದಿದೆ ಎಂದು ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಚಾರಣೆಯ ನಂತರ ಎಲ್ಲವೂ ಬಯಲಾಗಿ ಹೋಗಿದ್ದು, ನಡೆದದ್ದನ್ನು ಹೇಳಲು ಪೊಲೀಸರೂ ಹಿಂಜರಿಯುತ್ತಿದ್ದಾರೆ.