ಭಟ್ಕಳ, ನವೆಂಬರ್ 5: ಸಾಲ ಬಾಧೆಯಿಂದ ಕಂಗಾಲಾದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬುಧವಾರ ಬೆಳಿಗ್ಗೆ 7.30 ಗಂಟೆಯಿಂದ ಗುರುವಾರ ಬೆಳಿಗ್ಗೆಯವರೆಗಿನ ಅವಧಿಯಲ್ಲಿ ತಾಲೂಕಿನ ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಸಬ್ಬತ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಜುನಾಥ ಬಡ್ಕಾ ನಾಯ್ಕ (37) ಎಂದು ಗುರುತಿಸಲಾಗಿದೆ. ಈತನು ಪ್ರಾಥಮಿಕ ಕೃಷಿ ಬ್ಯಾಂಕ್ ಭಟ್ಕಳ, ಜನತಾ ಕೋ-ಆಪರೇಟಿವ್ ಬ್ಯಾಂಕ, ವರದಾ ಗ್ರಾಮೀಣ ಬ್ಯಾಂಕ್ ಕೋಣಾರದಲ್ಲಿ ಸಾಲ ಪಡೆದಿದ್ದನು ಎಂದು ಹೇಳಲಾಗಿದ್ದು, ೫ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಭರಣ ಮಾಡಬೇಕಾದ ಅನಿವಾರ್ಯತೆಯಿಂದ ಕಳೆದ ಕೆಲ ದಿನಗಳಿಂದ ಚಿಂತೆಗೆ ಶರಣಾದ ಬಗ್ಗೆ ಮಾಹಿತಿ ಲಭಿಸಿದೆ. ೪-೧೧-೨೦೦೯ರಂದು ಬೆಳಿಗ್ಗೆ ಸಾಲ ವ್ಯಾಜ್ಯಕ್ಕೆ ಸಂಬಂಧಿಸಿದ ಕೋರ್ಟ ನೋಟಿಸು ಹಿಡಿದು ಮನೆಯಿಂದ ಹೊರ ಬಿದ್ದವನು ಮರಳಿ ಮನೆಗೆ ಬಾರದೇ ಇರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಆತನ ಮನೆಯಿಂದ ಸುಮಾರು ೧.೫ಕಿಲೋ ಮೀಟರು ದೂರದ ಗೇರು ತೋಟದಲ್ಲಿ ಮೃತ ದೇಹವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯು ಮೂರು ಹೆಣ್ಣು ಮಕ್ಕಳು ಹಾಗೂ ಓರ್ವ ಬಾಲಕನನ್ನು ಅಗಲಿದ್ದಾನೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.