ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕರಾವಳಿಯಲ್ಲಿ ಮುಂದುವರಿದ ಭಾರೀ ಮಳೆ: ಉಳ್ಳಾಲದ ಮೂವರು ಮೀನುಗಾರರ ಸಹಿತ ಮೀನುಗಾರಿಕಾ ದೋಣಿ ನಾಪತ್ತೆ

ಮಂಗಳೂರು: ಕರಾವಳಿಯಲ್ಲಿ ಮುಂದುವರಿದ ಭಾರೀ ಮಳೆ: ಉಳ್ಳಾಲದ ಮೂವರು ಮೀನುಗಾರರ ಸಹಿತ ಮೀನುಗಾರಿಕಾ ದೋಣಿ ನಾಪತ್ತೆ

Thu, 12 Nov 2009 03:02:00  Office Staff   S.O. News Service
ಮಂಗಳೂರು, ನ.೧೧: ಕರಾವಳಿಯಲ್ಲಿ ಇದೀಗ ಮೂರನೆ ದಿನವೂ ಗಾಳಿ ಸಹಿತ ಗುಡುಗು ಮಳೆಯಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬಹುತೇಕ ಮೀನುಗಾರಿಕಾ ದೋಣಿಗಳು ದಡ ಸೇರಿವೆ. ಈ ನಡುವೆ ಉಳ್ಳಾಲದ ಮೀನುಗಾರಿಕಾ ದೋಣಿ ಸಹಿತ ಮೂವರು ಮೀನುಗಾರರು ನಾಪತ್ತೆಯಾಗಿರುವ ಬಗ್ಗೆ ಕರಾವಳಿ ಕಾವಲು ಪಡೆಯ ಪೊಲೀಸರು ತಿಳಿಸಿದ್ದಾರೆ.

ಉಳ್ಳಾಲ ಕೋಟೆಪುರದಿಂದ ಶನಿವಾರ ಹೊರಟಿದ್ದ ಅಶ್ರಫ್ ಎಂಬವರಿಗೆ ಸೇರಿದ ಮೀನುಗಾರಿಕಾ ದೋಣಿಯಲ್ಲಿ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಮೀನುಗಾರಿಕೆ, ಕೃಷಿ, ಆಸ್ತಿಪಾಸ್ತಿಗೆ ಹಾನಿ

ಜಿಲ್ಲೆಯಲ್ಲಿ ಭತ್ತದ ಬೆಳೆ ಕಟಾವಿಗೆ ಬಂದು ಶೇಖರಿಸುವ ಹಂತದಲ್ಲಿದ್ದ ಹಲವು ಪ್ರದೇಶಗಳ ರೈತರಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗಿದೆ.

ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ಮೀನುಗಾರರು ಹೆಚ್ಚು ಚಟುವಟಿಕೆಯಿಂದ ತೊಡಗಿದ್ದ ಅವಧಿಯಲ್ಲಿ ಹಠಾತ್ತಾಗಿ ಕಾಣಿಸಿಕೊಂಡ ಚಂಡ ಮಾರುತದಿಂದ ಟ್ರಾಲ್‌ಬೋಟ್, ಪರ್ಸಿನ್ ಬೋಟ್‌ನ ಮೀನುಗಾರರು ಅಪಾಯ ಎದುರಿಸಬೇಕಾಯಿತು. ಆಳ ಸಮುದ್ರದ ಮೀನುಗಾರರು ತೊಂದರೆ ಅನುಭವಿಸಬೇಕಾಗಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರಕ್ಷುಬ್ಧಗೊಂಡ ಸಮುದ್ರದ ವಾತಾವರಣ ಮೀನುಗಾರಿಕೆಗೆ ಅಡ್ಡಿಯಾಗಿದೆ.

ಕರಾವಳಿಯಲ್ಲಿ ಪ್ರತಿವರ್ಷ ಮಳೆಯಿಂದಾಗಿ ರಸ್ತೆ ಹಾನಿUಡಾಗುತ್ತಿದ್ದು, ಅದರ ದುರಸ್ತಿ ಹಾಗೂ ಹೊಸ ರಸ್ತೆ ಕಾಮಗಾರಿಗೆ ಮಳೆಗಾಲ ಮುಗಿಯಲಿ ಎಂದು ಕಾಯುವುದು ಸಾಮಾನ್ಯ. ಇದೀಗ ಹಲವು ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಡಾಮರೀಕರಣ ಕಾಮಗಾರಿಗೂ ಅಕಾಲಿಕ ಮಳೆಯಿಂದಾಗಿ ಹಾನಿಯಾಗಿದೆ.

ಕೆಲವು ಕಡೆ ಗುಡುಗು ಸಹಿತ ಸುರಿದ ಗಾಳಿ ಮಳೆಯಿಂದಾಗಿ ಪುತ್ತೂರು, ಸುಳ., ಬಜಪೆ, ಬಂಟ್ವಾಳ ಪ್ರದೇಶಗಳಲ್ಲಿ ವಿದ್ಯುತ್ ಉಪಕರಣಗಳಿಗೆ ಹಾಗೂ ಮೆಸ್ಕಾಂ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ.

ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ನೀರು; ಕಂಪೌಂಡ್ ಕುಸಿದು 2 ಮನೆಗೆ ಹಾನಿ

ಮಂಗಳೂರು: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರದ ಕೆಲವು ತಗ್ಗುಪ್ರದೇಶಗಳು ವಸ್ತುಶ: ಜಲಾವೃತಗೊಂಡಿದೆ.

ಫಳ್ನೀರ್, ಕದ್ರಿ ಇಳಿಜಾರು ರಸ್ತೆ, ಕಾರ್‌ಸ್ಟ್ರೀಟ್ ಮತ್ತಿತರ ಕಡೆ ಅಂಗಡಿ ಮುಂಗಟ್ಟು ಮತ್ತು ಅಪಾರ್ಟ್‌ಮೆಂಟ್‌ಗಳ ತಳ ಅಂತಸ್ತಿಗೆ ನೀರು ನುಗ್ಗಿದೆ. ಇದರಿಂದ ಜನರು ನೀರನ್ನು ಹೊರಚೆಲ್ಲಲು ಹರಸಾಹಸ ಪಡುವಂತಾಯಿತು.

ಪೂರ್ವಾಹ್ನ ೧೧ ಗಂಟೆಯ ವೇಳೆಗೆ ಸುರಿಯತೊಡಗಿದ ಮಳೆ ಮಧ್ಯಾಹ್ನದ ವೇಳೆಗೆ ತೀವ್ರಗೊಳ್ಳತೊಡಗಿತು.ನಗರದ ಬಹುತೇಕ ರಸ್ತೆಗಳ ಕಾಮಗಾರಿ ಅರ್ಧದಲ್ಲಿದ್ದು, ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನೂ ಕಲ್ಪಿಸದ ಕಾರಣ ನೀರೆಲ್ಲಾ ಮುಖ್ಯ ರಸ್ತೆ ಮತ್ತು ತಗ್ಗು ರಸ್ತೆಯತ್ತ ನುಗ್ಗಿ ಅಂಗಡಿ, ಮುಂಗಟ್ಟುಗಳಲ್ಲಿ ತುಂಬಿತು. ಕೊನೆಗೆ ಸಿಬ್ಬಂದಿಗಳು ಅಂಗಡಿ, ಗ್ಯಾರೇಜ್‌ನೊಳಗೆ ನುಗ್ಗಿದ ಕೆಸರುಮಯ ನೀರನ್ನು ಹೊರಚೆಲ್ಲಬೇಕಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ಮಧ್ಯೆ ನಗರದ ಸಿಟಿ ಆಸ್ಪತ್ರೆಯ ಮುಂಭಾಗದ ಮಲ್ಲಿಕಟ್ಟೆ ರಸ್ತೆಗೆ ನಾಗರಿಕರು ಕಲ್ಲನ್ನು ಅಡ್ಡವಿಟ್ಟು ಪ್ರತಿಭಟಿಸಿದ್ದಾರೆ. ಈ ರಸ್ತೆಯುದ್ದಕ್ಕೂ ಹೊಂಡವಿದ್ದು, ನೀರು ತುಂಬಿ ಜನರಿಗೆ ಮಾತ್ರವಲ್ಲ, ವಾಹನಗಳ ಓಡಾಟಕ್ಕೂ ಅಸಾಧ್ಯಾವಾಗಿದೆ ಎಂದು ಆರೋಪಿಸಿದ್ದಾರೆ.

ಕಂಪೌಂಡ್ ಗೋಡೆ ಕುಸಿತ

ನಗರದ ಹೈಲ್ಯಾಂಡ್ ಬಳಿಯ ಪಿ.ಎಫ್.ಎಕ್ಸ್ ಸಲ್ದಾನಾ ಎಂಬವರಿಗೆ ಸೇರಿದ ಹಳೆಯ ಕಾರ್ಖಾನೆಯ ಆವರಣ ಗೋಡೆ ಕುಸಿದ ಪರಿಣಾಮ ೨ ಮನೆಗಳಿಗೆ ಹಾನಿಯಾಗಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ. ಹಿಂದೆಯೂ ಈ ಕಂಪೌಂಡ್ ಕುಸಿದಿತ್ತು ಎನ್ನಲಾಗಿದೆ.

ಇಂದಿನ ಮಳೆ ವಿವರ
ಬೆಳ್ತಂಗಡಿ-೯.೬ ಮಿ.ಮೀ. 
ಉಪ್ಪಿನಂಗಡಿ ೨೦.೦ ಮಿ.ಮೀ. 
ಪುತ್ತೂರು ೨೨.೩ ಮಿ.ಮೀ.
ಸುಳ್ಯ ೧೪.೬ ಮಿ.ಮೀ.
ಬಜಪೆ- ೪೧.೪ ಮಿ.ಮೀ.
ಮಂಗಳೂರು- ೨೦.೮ ಮಿ.ಮೀ.

4 ದೋಣಿ ಮುಳುಗಡೆ, 4 ನಾಪತ್ತೆ



ಚಂಡನಮಾರುತದ ಗಾಳಿಯಿಂದಾಗಿ ಹಾನಿಗೊಳಗಾದ ಬೋಟ್ ಬೈಂದೂರಿನ ಬೋಟ್.  

ಮಂಗಳೂರು/ಉಡುಪಿ: ಚಂಡಮಾರುತದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳಲ್ಲಿ ನಾಲ್ಕು ದೋಣಿಗಳು ಮುಳುಗಡೆಯಾಗಿ, ನಾಲ್ಕು ದೋಣಿ ನಾಪತ್ತೆ ಯಾಗಿವೆ.

ಮಲ್ಪೆಯ ಎರಡು ಆಳ ಸಮುದ್ರ ದೋಣಿಗಳು ಗೋವಾ ಮತ್ತು ಕಾರವಾರ ಸಮೀಪ ಮುಳುಗಡೆಗೊಂಡಿದೆ. ತೊಟ್ಟಂ-ಬಡಾನಿಡಿಯೂರಿನ ಶಿವರಾಮ ಬಿ. ಸಾಲಿಯಾನ್ ಅವರಿಗೆ ಸೇರಿದ ‘ಸುರಕ್ಷ’ ಆಳಸಮುದ್ರ ದೋಣಿ ಮಂಗಳವಾರ ಸಂಜೆ ಮುಳುಗಿತು. ದೋಣಿಯಲ್ಲಿ ಭಟ್ಕಳ ಮೂಲದ ಮೀನುಗಾರರಾದ ಹೊನ್ನಪ್ಪ ಮೊಗೇರ, ಭುವನ್, ಸುರೇಶ್, ಮಂಜುನಾಥ್, ಕೃಷ್ಣ, ಹೇಮಂತ್ ಮತ್ತು ಗಜಾನನ ಅವರನ್ನು ಸಮೀಪದಲ್ಲಿದ್ದ ದೋಣಿಯವರು ರಕ್ಷಿಸಿ ವಾಸ್ಕೋದ ದಡ ಸೇರಿಸಿದ್ದಾರೆ. ಸುಮಾರು ೩೦ ಲಕ್ಷ ರೂ. ನಷ್ಟ ಉಂಟಾಗಿದೆ.

ಮಲ್ಪೆಯ ಶ್ಯಾಮಲಾ ಕುಂದರ್ ಅವರಿಗೆ ಸೇರಿದ ದೋಣಿ ಕಾರವಾರ ಸಮೀಪ ಮುಳುಗಿದೆ. ದೋಣಿಯಲ್ಲಿ ೭ ಮಂದಿ ಮೀನುಗಾರರನ್ನು ಸಮೀಪದ ದೋಣಿಯವರು ರಕ್ಷಿಸಿ ದಡ ಸೇರಿಸಿದ್ದಾರೆ. ಸುಮಾರು ೨೫ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೋಣಿ ಮಾಲಕರು ತಿಳಿಸಿದ್ದಾರೆ.

ಮಲ್ಪೆ ಬಂದರಿನಿಂದ ತೆರಳಿದ ಮಲ್ಪೆಯ ಮೀನುಗಾರರೋರ್ವರ ಬೀಡಿನ ಬಲೆಯ (ಬಲ್ಲೆಣ) ಸಣ್ಣ ದೋಣಿ ಕಣ್ಮರೆಯಾಗಿದೆ ಎಂದು ತಿಳಿದು ಬಂದಿದೆ. ದೋಣಿಯಲ್ಲಿ ಮೂವರು ಮೀನುಗಾರರಿದ್ದರು.

ಬೀಡಿನ ಬಲೆಯ ಮತ್ತೊಂದು ಸಣ್ಣ ದೋಣಿಯೊಂದು ಅಲೆಯ ಹೊಡೆತಕ್ಕೆ ಎರಡು ಭಾಗವಾಗಿ ಹೋಗಿದೆ. ತುಂಡಾದ ದೋಣಿಯಯಲ್ಲಿ ತೇಲು ತ್ತಿದ್ದ ಶಿರೂರಿನ ೪ ಮೀನುಗಾರರನ್ನು ಮಲ್ಪೆಯ ಕಾರ್ತಿಕ್ ಫ್ರಿನ್ಸ್ ಆಳಸಮುದ್ರ ದೋಣಿಯವರು ದಡ ಸೇರಿಸಿದ್ದಾರೆ.

ಏಳು ಮಂದಿ ಮೀನುಗಾರರಿದ್ದ ಮಲ್ಪೆಯ ಸೀಫೋನಿಕ್ಸ್ ಆಳಸಮುದ್ರ ದೋಣಿ ಸಮುದ್ರ ಮಧ್ಯೆ ಎಂಜಿನ್ ಕೆಟ್ಟು ನಿಂತಿದೆ. ಕೋಸ್ಟಲ್ ಗಾರ್ಡ್‌ಗೆ ವಿಷಯ ತಿಳಿಸಲಾಗಿದ್ದು ದೋಣಿ ಇನ್ನೂ ದಡ ಸೇರಿರುವ ಮಾಹಿತಿ ದೊರೆತಿಲ್ಲ.

ಶಿರೂರು: ದೋಣಿ ದುರಂತ

ಶಿರೂರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಎರಡು ಯಾಂತ್ರೀಕೃತ ದೋಣಿಗಳಲ್ಲಿ ಒಂದು ದೋಣಿ ಮುಳುಗಡೆಯಾಗಿದ್ದು ಅದರಲ್ಲಿದ್ದ ಮೂವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ದೋಣಿ ಬುಧವಾರ ಮುಂಜಾನೆ ಕಾರವಾರ ಬಂದರಿಗೆ ತಲುಪಿದ್ದು ಅದರಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸುಮಾರು ೪ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
 
ಶಿರೂರಿನ ಆಲ್ ಖತೀಜಾ ಹಾಗೂ ಸಾದಿಯಾ ಪರ್ವಿನ್ ಬೋಟುಗಳು ಬುಧವಾರ ಆಳಸಮುದ್ರ ಮೀನುಗಾರಿಕೆಗೆ ಶಿರೂರಿನಿಂದ ತೆರಳಿದ್ದು ಏಕಾ‌ಏಕಿ ಬೀಸಿದ ಗಾಳಿ-ಮಳೆ ಬೋಟುಗಳನ್ನು ದಿಕ್ಕು ತಪ್ಪಿಸುವಂತೆ ಮಾಡಿತ್ತು.

ದು ಬೋಟು ದಿಕ್ಕು ತಪ್ಪಿ ಸಾಗುತ್ತಿದ್ದಾಗ ಅದರಲ್ಲಿದ್ದ ಖದ್ರು ಆದಂ, ಡುಮ್ಮಾ ಇರ್ಫಾನ್, ತಿಮಾನಿ ಅರ್ಫಾತ್ ಹರಸಾಹಸ ಪಟ್ಟು ಬೋಟನ್ನು ಕಾರವಾರದ ಬಂದರಿಗೆ ತಲುಪುವಂತೆ ಮಾಡಿದರು. ಆದರೆ ಇನ್ನೊಂದು ಯಾಂತ್ರೀಕೃತ ದೋಣಿ ಗಾಳಿಯ ಹೊಡೆತಕ್ಕೆ ಸಿಲುಕಿ ಮಗುಚಿಕೊಂಡಾಗ ಅದರಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಹಿಮಾನ್ ಮಹಮ್ಮದ್ ಗೌಸ್ ಹಾಗೂ ಹಮೀದ್ ಸುಮಾರು ೫ ಗಂಟೆಗಳ ಕಾಲ ಮುಳುಗಿದ ಬೋಟನ್ನು ಹಿಡಿದು ಜೀವನ್ಮರಣ ಹೋರಾಟ ನಡೆಸಿದರು. ಈ ಸಂದರ್ಭ ಕಾರವಾರ ದಿಂದ ಮಲ್ಪೆಯತ್ತ ಸಾಗುತ್ತಿದ್ದ ಇನ್ನೊಂದು ದೋಣಿಯವರು ಬೋಟಿನವರು ಅಪಾಯ ದಿಂದ ಇದ್ದ ಇವರನ್ನು ರಕ್ಷಿಸಿ ಮಲ್ಪೆ ಬಂದರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟಿನಲ್ಲಿದ್ದ ಬಲೆ, ಎಂಜಿನ್‌ಗಳು ಸಮುದ್ರ ಪಾಲಾಗಿವೆ.

ಉಪ್ಪುಂದ: ಮೂರು ಬೋಟುಗಳಿಗೆ ಹಾನಿ

ಬೈಂದೂರು: ಉಪ್ಪುಂದದಲ್ಲಿ ದಡದಲ್ಲಿ ನಿಲ್ಲಿಸಲಾಗಿದ್ದ ೩ ದೋಣಿಗಳು ಹಾನಿಗೀಡಾಗಿವೆ. ವೀರಭದ್ರ ಖಾರ್ವಿ ಅವರ ದೋಣಿಯ ಎಂಜಿನ್ ಸಮುದ್ರಪಾಲಾಗಿದ್ದು ಸುಮಾರು ೪ ಲಕ್ಷ ರೂ. ನಷ್ಟ ಉಂಟಾಗಿದೆ. ತೆರೆ ಕಲ್ಲಿಗೆ ಅಪ್ಪಳಿಸಿದ ವೇಗಕ್ಕೆ ದೋಣಿಯೊಂದು ತೂತಾಗಿದೆ. ಇನ್ನೊಂದು ದೋಣಿ ನಾಪತ್ತೆಯಾಗಿದೆ.

ಗಂಗೊಳ್ಳಿ: ದೋಣಿ ನಾಪತ್ತೆ

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ನ. ೮ರಂದು ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ದೋಣಿಯೊಂದು ನಾಪತ್ತೆಯಾಗಿದೆ. ಇದರಲ್ಲಿ ೩ ಮೀನುಗಾರರಿದ್ದು ಈ ದೋಣಿ ಬೇರೆಲ್ಲಿಯೋ ದಡ ಸೇರಿರಬೇಕೆಂದು ಸಂಶಯಪಡಲಾಗಿದೆ. ಬುಧವಾರ ಸಂಜೆಯ ತನಕ ಈ ದೋಣಿ ಪತ್ತೆಯಾಗಿಲ್ಲ.

ಇಂಜಿನ್ ಚಾಲಿತ ದೋಣಿ ನಾಪತ್ತೆ

ಉಳ್ಳಾಲ: ಕೋಟೆಪುರದಿಂದ ಮೀನುಗಾರಿಕೆಗೆ ಹೊರಟಿದ್ದ ಇಂಜಿನ್ ಚಾಲಿತ ದೋಣಿ ಆಳಸಮುದ್ರದಲ್ಲಿ ನಾಪತ್ತೆಯಾಗಿದ್ದು ಅದರಲ್ಲಿದ್ದ ಮೂವರು ಮೀನುಗಾರರ ಸುಳಿವು ಪತ್ತೆಯಾಗಿಲ್ಲ.

ತಮಿಳುನಾಡಿನ ಸೆಲ್ವಂ, ಜಗನ್, ಪಂಗರಾಜ್ ನಾಪತ್ತೆಯಾಗಿದ್ದು ಇವರು ಕೋಟೆಪುರದ ಮಹಮ್ಮದ್ ಅಶ್ರಫ್‌ರಿಗೆ ಸೇರಿದ ಯುಬಿ‌ಎ ಫಿಶರೀಸ್ ದೋಣಿಯಲ್ಲಿ ನ. ೭ರಂದು ಮೀನುಗಾರಿಕೆಗೆ ತೆರಳಿದ್ದರು. ನ. ೯ರಂದು ಮಧ್ಯಾಹ್ನ ೩ ಗಂಟೆಗೆ ಸೆಲ್ವಂ ತನ್ನ ಮೊಬೈಲ್‌ನಿಂದ ಅಶ್ರಫ್‌ರಿಗೆ ಅಪಾಯದ ಸಂದೇಶ ನೀಡಿದ್ದು ಬದಲಿ ದೋಣಿ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದರು. ಬದಲಿ ದೋಣಿ ಮೂಲಕ ಹುಡುಕಿದರೂ ಅವರು ಪತ್ತೆಯಾಗಿಲ್ಲ. ಪೊಲೀಸರಿಗೆ ದೂರು ನೀಡಲಾಗಿದೆ.

Share: