ಹಾಸನ, ಮಾ.೧೫- ಹೊಸ ವರ್ಷದ ಹರುಷಕೆ ಮತ್ತೆ ಬಂದಿರುವ ಯುಗಾದಿ ಹಬ್ಬ ಆಚರಣೆಗೆ ಜನತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಆದರೂ ಯುಗಾದಿ ಆಚರಣೆಗೆ ಜನತೆ ಆಸಕ್ತಿ ಮಾತ್ರ ಕುಂದಿಲ್ಲ.
ಝಳ ಝಳಿಸುವ ಬೇಸಿಗೆಯ ಸುಡು ಬಿಸಿಲಿನ ಧಗೆ ಒಂದೆಡೆಯಾದರೆ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಮತ್ತೊಂದೆಡೆ. ಆದರೂ ಉಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲೇಬೇಕಾದ ಅನಿರ್ವಾಯತೆಯಲ್ಲಿ ಸಿಲುಕಿರುವ ಜನತೆ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿಗಳನ್ನು ಭರಾಟೆಯಿಂದ ಖರೀದಿಸಿದ ದೃಶ್ಯ ಸಾಮಾನ್ಯವಾಗಿತ್ತು.
ತರಕಾರಿ, ಹಣ್ಣು-ಹಂಪು, ಹೂವಿನ ಬೆಲೆಗಳಂತೂ ಎಂದಿಗಿಂತ ದುಬಾರಿಯಾಗಿತ್ತು. ಮಾವು ಮತ್ತು ಬೇವಿನ ಸೊಪ್ಪಿನ ಬೆಲೆ ಕೂಡ ದುಪ್ಪಟ್ಟಾಗಿತ್ತು. ಅದರೂ ಹಬ್ಬ ಆಚರಿಸುವ ಜನರಲ್ಲಿ ಮಾತ್ರ ಉತ್ಸಾಹ ಕುಂದಿರಲಿಲ್ಲ.
ಹಾಸನದ ಕಟ್ಟಿನಕೆರೆ ಮಾರುಕಟ್ಟೆ, ಮುಖ್ಯಮಾರುಕಟ್ಟೆ, ಕಸ್ತೂರಿ ಬಾ ರಸ್ತೆಗಳಲ್ಲಿ ಜನ ಜಂಗುಳಿಯಿಂದ ಕೂಡಿದ್ದು, ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದಂತಿತ್ತು.
ಹೊಸ ವಸ್ತ್ರಗಳ ಖರೀದಿಗೂ ಜನತೆಯ ಆಸಕ್ತಿ ಹೆಚ್ಚಾದಂತೆ ಕಂಡು ಬಂದಿತು. ಬೆಲೆ ಏರಿಕೆಯ ಬಿಸಿ ಇದ್ದರೂ, ವರ್ಷಾಚರಣೆಯ ಉಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಆಸಕ್ತಿ ತೋರಿದ್ದರು.