ಹೈದರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ ಹಟ್ಟಿ ಸುತ್ತಮುತ್ತ ಚಿನ್ನದ ನಿಕ್ಷೇಪಗಳ ಶೋಧನೆಗಾಗಿ ಇಂಗ್ಲೆಂಡ್ನ �ಮನ್� ಎಂಬುವರು ಸಮೀಕ್ಷೆ ನಡೆಸಿದ್ದರು. �ಹಟ್ಟಿ ಸುತ್ತಮುತ್ತಲಿನ ಭೂಮಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದವರು ನಮ್ಮ ದೇಸೀ ಗಣಿ ತಜ್ಞರೇ ಹೊರತು ವಿದೇಶಿಯರಲ್ಲ.
ಹಟ್ಟಿಯ ಚಿನ್ನದ ಗಣಿಗಾರಿಕೆಗೆ ಶತಮಾನಗಳ ಇತಿಹಾಸವಿದೆ. ಗಣಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಗಣಿಗಾರಿಕೆಯ ಬಗ್ಗೆ ನಮ್ಮ ಪೂರ್ವಜರ ದೂರದೃಷ್ಟಿ, ಪರಿಶ್ರಮ ಮತ್ತು ದೇಸಿ ತಂತ್ರಜ್ಞಾನ ಬಳಸಿಕೊಂಡೇ ಚಿನ್ನ ಉತ್ಪಾದಿಸಲು ಅವರು ಅನುಸರಿಸಿದ ಮಾರ್ಗಗಳು ಆಶ್ಚರ್ಯ ಉಂಟು ಮಾಡುತ್ತವೆ.
ಹೈದರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ ಹಟ್ಟಿ ಸುತ್ತಮುತ್ತ ಚಿನ್ನದ ನಿಕ್ಷೇಪಗಳ ಶೋಧನೆಗಾಗಿ ಇಂಗ್ಲೆಂಡ್ನ ‘ಮನ್’ ಎಂಬುವರು ಸಮೀಕ್ಷೆ ನಡೆಸಿದ್ದರು. ‘ಹಟ್ಟಿ ಸುತ್ತಮುತ್ತಲಿನ ಭೂಮಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದವರು ನಮ್ಮ ದೇಸೀ ಗಣಿ ತಜ್ಞರೇ ಹೊರತು ವಿದೇಶಿಯರಲ್ಲ. ಹಟ್ಟಿ ಸುತ್ತ ಮುತ್ತ ಚಿನ್ನದ ಅದಿರು ತೆಗೆಯುವ ಪ್ರಯತ್ನ ನಡೆದಿತ್ತು ಎಂಬುದಕ್ಕೆ ಈ ಪ್ರದೇಶದಲ್ಲಿರುವ ಅನೇಕ ಬಾವಿಗಳು ಪುರಾವೆ ಒದಗಿಸುತ್ತವೆ. ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚುವ ಪ್ರಯತ್ನ ಮೊದಲೇ ನಡೆದಿತ್ತು ಎಂದು ಮನ್ ಅವರು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.
ಹಳೆಯ ಗಣಿ (ಹಟ್ಟಿಯ) ಪ್ರದೇಶದ ‘ಮೇನ್ ಶಾಫ್ಟ್’ ಎಂದು ಕರೆಯಲಾಗುವ ಪುರಾತನ ಗಣಿಯಲ್ಲಿ ಅನೇಕ ಮರದ ದಿಮ್ಮಿಗಳು ಬಹು ಹಿಂದೆಯೇ ದೊರಕಿವೆ. ಅವುಗಳ ನಮೂನೆಗಳನ್ನು ಇಂಗಾಲದಿಂದ ಸಂಸ್ಕರಿಸಿದಾಗ ಇಲ್ಲಿ ಸುಮಾರು 2,000 ವರ್ಷಗಳ ಹಿಂದೆಯೇ ಗಣಿಗಾರಿಕೆ ಚಟುವಟಿಕೆ ನಡೆದಿದ್ದವು ಎಂಬುದನ್ನು ಸೂಚಿಸುತ್ತವೆ ಎಂಬ ಮಾಹಿತಿಗಳ ದಾಖಲೆಗಳು ಗಣಿ ಕಂಪೆನಿಯಲ್ಲಿವೆ. ಈ ಗಣಿಯಲ್ಲಿ ದೊರೆತ ಹಳೆಯ ಮರದ ದಿಮ್ಮಿ, ಕಟ್ಟಿಗೆಗಳು ಈಗಲೂ ಕಂಪೆನಿಯ ಸಂಗ್ರಹಾಲಯದಲ್ಲಿವೆ.
ಇತಿಹಾಸ: ಹಟ್ಟಿ ಚಿನ್ನದ ಗಣಿಗಾರಿಕೆ ಇತಿಹಾಸವನ್ನು ತಜ್ಞರು ಮೂರು ಕಾಲಘಟ್ಟದಲ್ಲಿ ವಿಂಗಡಿಸಿದ್ದಾರೆ. ಮೌರ್ಯ ಚಕ್ರವರ್ತಿ ಅಶೋಕನ ಕಾಲ ಮೊದಲನೆ ಘಟ್ಟ, ಎರಡನೆಯ ಘಟ್ಟ ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆದ ಗಣಿಗಾರಿಕೆಯ ಕಾಲ ಅಂದರೆ ಕ್ರಿ.ಶ1882 ರಿಂದ 1920ರವರೆಗೆ. 1947ರವರೆಗಿನ ಗಣಿಗಾರಿಕೆಯನ್ನು ಆಧುನಿಕ ಕಾಲ ಎಂದು ಗುರುತಿಸಲಾಗಿದೆ. ಇದೇ ಮೂರನೆಯ ಘಟ್ಟ.
ಅಶೋಕನ ಕಾಲದಲ್ಲಿ ಬಾವಿಗಳ ಮಾದರಿ ಯಲ್ಲಿಯೇ ನೆಲವನ್ನು ಸುಮಾರು 640 ಅಡಿಗಳಿಗಿಂತ ಹೆಚ್ಚು ಆಳಕ್ಕೆ ತೋಡಿ ಚಿನ್ನ ತೆಗೆದ ಕುರುಹುಗಳು ಪತ್ತೆಯಾಗಿವೆ. ಈ ಗಣಿಗಳಲ್ಲಿ ಕೆಲವು ಅಶೋಕ ಕಾಲಕ್ಕಿಂತಲೂ ಮೊದಲಿನವು ಮತ್ತು ನಂತರದ ಕಾಲಕ್ಕೆ ಸೇರಿದವು ಎಂದು ಗುರುತಿಸಲಾಗಿದೆ. ಆ ಕಾಲದಲ್ಲಿ ಶಿಲಾ ಪದರಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿ ಬೆಂಕಿ ಇಡುತ್ತಿದ್ದರು. ಕಲ್ಲು ಸಾಕಷ್ಟು ಕಾದ ಮೇಲೆ ಅದರ ಮೇಲೆ ತಣ್ಣೀರು ಚೆಲ್ಲಿ ಕಲ್ಲು ಪದರಗಳಾಗಿ ಸೀಳುವಂತೆ ಮಾಡುತ್ತಿದ್ದರು. ಬಳಿಕ ಈ ಪದರಗಳನ್ನು ಒಡೆದು ಅದಿರನ್ನು ಬೇರ್ಪಡಿಸುತ್ತಿದ್ದರು. ಆನಂತರ ಅದಿರನ್ನು ಸಂಸ್ಕರಿಸಿ ಚಿನ್ನ ತೆಗೆಯುತ್ತಿದ್ದರು ಎಂದು ದಾಖಲೆಗಳು ಹೇಳುತ್ತವೆ.
ಎರಡನೆಯ ಕಾಲಘಟ್ಟದಲ್ಲಿ ಅಂದರೆ 19ನೇ ಶತಮಾನದ ಆರಂಭದಲ್ಲಿ ಚಿನ್ನದ ನಿಕ್ಷೇಪಗಳಿಗಾಗಿ ವ್ಯಾಪಕ ಶೋಧ ನಡೆಯಿತು. ಆಗ ಸ್ವಲ್ಪಮಟ್ಟಿಗೆ ನೂತನ ತಂತ್ರಜ್ಞಾನ ಬಳಸಿಕೊಂಡು ಅದಿರು ತೆಗೆಯುವ ಪ್ರಯತ್ನಗಳು ನಡೆದವು. ಆದರೆ ಆ ಪ್ರಯತ್ನಗಳು ನಿರೀಕ್ಷಿಸಿದ ಫಲ ನೀಡಲಿಲ್ಲ.
ಆನಂತರ ಜಾನ್ ಟೈಲರ್ ಎಂಬ ಬ್ರಿಟಿಷ್ ಭೂಗರ್ಭ ಶಾಸ್ತ್ರಜ್ಞ ಸಮೀಕ್ಷೆ ಕೈಗೊಂಡು ಹಟ್ಟಿ ಪ್ರದೇಶದ ಭೂಮಿಯ ಆಳದಲ್ಲಿ ಚಿನ್ನದ ಅದಿರು ಹೇರಳವಾಗಿದೆ ಎಂಬ ನಿರ್ಧಾರಕ್ಕೆ ಬಂದರು.
ಆಧುನಿಕ ತಂತ್ರಜ್ಞಾನ ಬಳಸಿ ಕೋಲಾರ ಚಿನ್ನದ ಗಣಿಯಲ್ಲಿ ಅದಿರು ತೆಗೆಯುವ ಪ್ರಯತ್ನ ಆರಂಭಿಸಿದವರೂ ಟೈಲರ್ ಅವರೇ. ಬೆಂಗಳೂರಿನ ಸೇನಾಧಿಕಾರಿಗಳ ಸಹಾಯದಿಂದ ಗಣಿಗಾರಿಕೆ ಆರಂಭಿಸಿ ಅವರು ಯಶಸ್ವಿಯಾದರು. ಮುಂದೆ ಇದು ಹಟ್ಟಿಯಲ್ಲಿ ಗಣಿಗಾರಿಕೆಯನ್ನು ಪುನರಾರಂಭಿಸುವುದಕ್ಕೆ ಒತ್ತು ನೀಡಿತು. ಈ ಮೂಲಕ ಜಾನ್ ಟೈಲರ್ ಹಟ್ಟಿಯಲ್ಲಿ ಆಧುನಿಕ ಗಣಿಗಾರಿಕೆ ಆರಂಭವಾಗಲು ಕಾರಣರಾದರು.
ಹಟ್ಟಿ ನಿಕ್ಷೇಪದಲ್ಲಿ ಆಧುನಿಕ ಗಣಿಗಾರಿಕೆಯನ್ನು ಹೈದರಾಬಾದ್ ಮೂಲದ ಡೆಕ್ಕನ್ ಎಂಬ ಸಂಸ್ಥೆ ಕಂಪೆನಿ ಆರಂಭಿಸಿತು ಎಂದು ದಾಖಲೆಗಳು ಹೇಳುತ್ತವೆ. ಈ ಕಂಪೆನಿಯ ಅಂಗ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿಯು 1902ರ ನಂತರ ಅತ್ಯಾಧುನಿಕ ಗಣಿಗಾರಿಕೆ ಆರಂಭಿಸಿತು ಎನ್ನಲಾಗಿದೆ. ಆದರೆ ಈ ಪ್ರಯತ್ನಗಳು ಚುರುಕುಗೊಂಡಿದ್ದು 1947ರ ನಂತರ. ಕಾಲ ಕಾಲಕ್ಕೆ ಬದಲಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತ ಬೆಳೆದ ಹಟ್ಟಿ ಚಿನ್ನದ ಗಣಿಯು ಈಗ ದೇಶದ ಏಕೈಕ ಮತ್ತು ಹೆಚ್ಚು ಚಿನ್ನ ಉತ್ಪಾದಿಸುವ ಗಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗಣಿಗಾರಿಕೆ ಇನ್ನೂ ಹೆಚ್ಚು ಕಾಲ ಸಕ್ರಿಯವಾಗಿರಲು ಹೊಸ ತಂತ್ರಜ್ಞಾನ ಅಳವಡಿಕೆ, ಅದಿರು ಸಂಸ್ಕರಣೆಗೆ ಹೊಸ ಮಿಲ್ಗಳ ನಿರ್ಮಾಣ ಕಾರ್ಯವನ್ನು ಗಣಿ ನಿಗಮ ಕೈಗೊಂಡಿದೆ. ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಇನ್ನೂ ಅರವತ್ತು ವರ್ಷಗಳ ಗಣಿಗಾರಿಕೆ ನಡೆಸಬಹುದು ಎನ್ನುತ್ತಾರೆ ಗಣಿಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ವೈ. ವೆಂಕಟೇಶ್.
ಸೌಜನ್ಯ: ಈ ಕವಿ ಕರ್ನಾಟಕ