ಬೆಂಗಳೂರು, ಮಾ. 3 : ಬಿಡದಿ ಬಳಿಯಿರುವ ನಿತ್ಯಾನಂದನ ಆಶ್ರಮದಲ್ಲಿ ಮೂರು ಕುಟೀರಗಳಿಗೆ ಬೆಂಕಿ ಇಡಲಾಗಿದೆ. ಅಲ್ಲದ್ದ ಪುಸ್ತಕಗಳು ಸುಟ್ಟು ಭಸ್ಮವಾಗಿವೆ. ಕಾಮುಕ ಸ್ವಾಮಿಯ ವಿರುದ್ಧ ಸಿಡಿದೆದ್ದಿರುವ ಸಾರ್ವಜನಿಕರು ಮಠಕ್ಕೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಆಶ್ರಮದ ಹೊರಗಿರೆ ನೆರೆದಿರುವ ಜನ ನಿತ್ಯಾನಂದನ ಚಿತ್ರವಿದ್ದ ಬ್ಯಾನರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರನ್ನು ಹಿಡಿದಿಡುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರಿನ ಬಿಡದಿ ಬಳಿಯ ನಿತ್ಯಾನಂದನಿಗೆ ಸೇರಿದ ಸುಮಾರು 70 ಎಕರೆ ಪ್ರದೇಶದಲ್ಲಿ ಆಧುನಿಕ ಆಶ್ರಮವಿದೆ. ನಿತ್ಯವೂ ಅಲ್ಲಿ ನಿತ್ಯಾನಂದನ ಕೃಪೆಯಿಂದ ಜಪತಪಗಳು ನಡೆಯುತ್ತಿವೆ. ದೇಶದ ಭಕ್ತರಲ್ಲದೇ, ವಿದೇಶಿ ಪ್ರಜೆಗಳು ಈ ಸ್ವಾಮಿಯ ಭಕ್ತರಾಗಿದ್ದಾರೆ. ವಿಶ್ವಾದ್ಯಂತ 32 ಕಡೆಗಳಲ್ಲಿ ಆತನ ಆಶ್ರಮಗಳಿವೆ. ಇಷ್ಟಲ್ಲದೇ ಆಲದ ಮರದ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ, ಧ್ಯಾನ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ನಿತ್ಯಾನಂದ ತನ್ನ ಸ್ವಬಲದಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತಾನೆಂದು ಭಕ್ತರಲ್ಲಿ ನಂಬಿಕೆ ಮನೆಮಾಡಿದೆ. ಆಧ್ಯಾತ್ಮ, ಯೋಗ, ಲೈಂಗಿಕತೆ ಬಗ್ಗೆ ಇಂಗ್ಲಿಷಿನಲ್ಲಿ ಗಂಟೆಗಟ್ಟಲೆ ಭಾಷಣ ಹೊಡೆಯುತ್ತಿದ್ದ ನಿತ್ಯಾನಂದನ ಇತ್ತೀಚಿನ ನಡವಳಿಕೆ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು.
ಕಾವಿಯೊಳಗಿನ ಕಾಮುಕ : ಕಾವಿ ಧರಿಸಿದವರೆಲ್ಲರೂ ಸ್ವಾಮೀಜಿಗಳಲ್ಲ. ಆದರೆ, ಕಾವಿ ಧರಿಸಿದರೆಲ್ಲೂ ಕೆಟ್ಟವರಲ್ಲ. ಕಾವಿಯೊಳಗೂ ಕಾಮುಕರಿದ್ದಾರೆ. ಸಮಾಜ ಇನ್ನು ಮುಂದಾದರೂ ಎಚ್ಚೆತ್ತುಗೊಳ್ಳಬೇಕು ಎಂದು ಪತ್ರಕರ್ತೆ ಪ್ರತಿಭಾ ನಂದಕುಮಾರ್ ಹೇಳಿದ್ದಾರೆ. ಈ ಸ್ವಾಮೀಜಿಯ ಬಗ್ಗೆ ಅನೇಕ ಅನುಮಾನಗಳನ್ನು ನಾನು ಪತ್ರಿಕೆಯಲ್ಲಿ ಬರೆದಿರುವೆ. ಆದರೆ, ಸರಕಾರವಾಗಲಿ, ಜನಸಾಮಾನ್ಯರಾಗಲಿ ಎಚ್ಚತ್ತುಕೊಳ್ಳಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಸ್ವಾಮೀಜಿ : ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಥದೇ ಇನ್ನೊಂದು ಘಟನೆ ನಡೆದಿತ್ತು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ಸ್ವಾಮೀಜಿ ಶಿವಮಾರುತ್ ದ್ವಿವೇದಿ ಅಲಿಯಾಸ್ ಇಚ್ಚಾಧರಿ ಸಂತ ಸ್ವಾಮಿ ಭೀಮಾನಂದಜೀ ಮಹಾರಾಜ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ ಕಾನಪುರ್ ಪ್ರದೇಶದಲ್ಲಿ ಭವ್ಯವಾದ ಬಂಗಲೆಯನ್ನು ಕಟ್ಟಿಕೊಂಡಿರುವ ಶಿವಮಾರುತ್, ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ವೇಶ್ಯಾವಾಟಿಕೆಯಿಂದ ಕೋಟ್ಯಂತರ ಆದಾಯ ಗಳಿಸಿದ್ದಾನೆ. ದಾಳಿಯ ವೇಳೆ ಸ್ವಾಮೀಜಿ, ಆತನ ಸಹಚರ, ಆರು ಮಂದಿ ಹೆಣ್ಣುಮಕ್ಕಳು, ಇಬ್ಬರು ಗಗನಸಖಿಯರನ್ನು ಬಂಧಿಸಲಾಗಿತ್ತು. ಬಂಧಿತ ವ್ಯಕ್ತಿ ಸ್ವಾಮೀಜಿ ವೇಷಧರಿಸಿ ಅನೇಕರಿಗೆ ಮೋಸ ಮಾಡಿದ್ದಾನೆ. ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ಈತನ ವಿರುದ್ಧ ಮೋಕಾ ಕಾಯ್ದೆ ಸೂಕ್ತ ಎಂದು ದೆಹಲಿ ಪೊಲೀಸರು ತೀರ್ಮಾನಿಸಿದ್ದಾರೆ.
ಕೃಪೆ :ದ್ಯಾಟ್ಸ್ ಕನ್ನಡ