ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಶಿಕ್ಷಣದ ವ್ಯಾಪಾರೀಕರಣದಿಂದ ಅಶಿಸ್ತು ಉಲ್ಭಣ: ಶಾಸಕ ಜೆ.ಡಿ.ನಾಯ್ಕ

ಭಟ್ಕಳ: ಶಿಕ್ಷಣದ ವ್ಯಾಪಾರೀಕರಣದಿಂದ ಅಶಿಸ್ತು ಉಲ್ಭಣ: ಶಾಸಕ ಜೆ.ಡಿ.ನಾಯ್ಕ

Mon, 02 Nov 2009 02:33:00  Office Staff   S.O. News Service
ಭಟ್ಕಳ, ನವೆಂಬರ್ 1:ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಸಮಾಜದಲ್ಲಿ ಅಶಿಸ್ತು ಉಲ್ಭಣಗೊಂಡಿದ್ದು, ಭವಿಷ್ಯ ಮಂಕಾಗುತ್ತಿದೆ. ನಿರುದ್ಯೋಗದ ಹೆಚ್ಚಳದೊಂದಿಗೆ, ಸಂಸ್ಕೃತಿಯ ಅಧಃಪತನವೂ ಎಗ್ಗಿಲ್ಲದೇ ಸಾಗಿದೆ ಎಂದು ಶಾಸಕ ಜೆ.ಡಿ.ನಾಯ್ಕ ವಿಷಾದ ವ್ಯಕ್ತಪಡಿಸಿದ್ದಾರೆ.

ಅವರು ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಪ್ರತಿಯೋರ್ವನಿಗೂ ಆತನ ಮಾತೃ ಭಾಷೆಯ ಮೇಲೆ ಅಭಿಮಾನ ಮುಖ್ಯ. ನಮ್ಮ ಭಾಷೆಯ ಮೇಲೆ ನಮಗೆ ವಿಶ್ವಾಸವಿಲ್ಲದೇ ಹೋದರೆ ಕನ್ನಡವನ್ನು ರಕ್ಷಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದ ನಾಯ್ಕ, ಕನ್ನಡ ಪ್ರೇಮಿಗಳು ಉಳಿದ ಭಾಷೆಗಳ ವಿರೋಧಿಗಳಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಅವರು ಇದರಲ್ಲಿ ಮಾಧ್ಯಮದ ಕೊಡುಗೆ ಇರುವುದನ್ನೂ ಒತ್ತಿ ಹೇಳಿದರು.
 
ರಾಜಕೀಯ ಹಿತಾಸಕ್ತಿಗಾಗಿ ಭಟ್ಕಳದ ಶಾಂತಿಯನ್ನು ಬಲಿ ಕೊಡಲು ತಾವು ತಯಾರಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು. ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಯನ್ನು ಪ್ರಸ್ತಾಪಿಸಿದ ಶಾಸಕರು ರಸ್ತೆ ಅಭಿವೃದ್ಧಿಗಾಗಿ 30 ಲಕ್ಷ ರೂಪಾಯಿಯನ್ನು ನೆರೆಪರಿಹಾರದ ಅನುದಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಕೇಂದ್ರ ಸರಕಾರದಿಂದಲೂ 8 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ತಾಲೂಕಿನ ಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿರುವುದಾಗಿ ಪ್ರಕಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಾಫ್ ಮಾತನಾಡಿ, ಕನ್ನಡ ಎನ್ನುವುದು ಸಾಮರಸ್ಯದ ಸಂಕೇತ. ಛಂದಸ್ಸು, ತ್ರಿಪದಿ, ಚೌಪದಿ, ದಾಸ ಸಾಹಿತ್ಯ.. ಹೀಗೆ ಹತ್ತು ಹಲವು ಸಾಹಿತ್ಯ ಪ್ರಕಾರಗಳನ್ನು ಮೈಗೂಡಿಸಿ ನಿಂತ ಕನ್ನಡದಲ್ಲಿ ಈಗ ವಿಷಾದದ ಛಾಯೆ ಆವರಿಸಿಕೊಂಡಿದೆ. ಕಾಡು, ನೀರು, ನೆಲ ಬರಿದಾಗುತ್ತಿದ್ದು ನಾಡಿನ ಉಳಿವಿಗಾಗಿ ಹೋರಾಟದ ಅಗತ್ಯವಿದೆ ಎಂದು ಹೇಳಿದರು. ಕನ್ನಡದ ಬಗ್ಗೆ ಕೆಲವರು ಮೂಢ ನಂಬಿಕೆಯ ಮೊರೆ ಹೋಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ತಮ್ಮ ಎಂದಿನ ಹಾಸ್ಯ ಲಹರಿಯ ಮೂಲಕ ಖಂಡನೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಭಟ್ಕಳ ಉಪವಿಭಾಗಾಧಿಖಾರಿ ತ್ರಿಲೋಕಚಂದ್ರ, ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ, ಪುರಸಭಾಧ್ಯಕ್ಷ ಫರ್ವೇಜ್ ಕಾಶೀಮ್‌ಜಿ, ತಹಸೀಲ್ದಾರ ಎಸ್.ಎಮ್.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ನೌಕರರ ಸಂಘದ ಅಧ್ಯಕ್ಷ ಕೆ.ಡಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ತಹಸೀಲ್ದಾರ ಎಸ್.ಎಮ್.ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ದೇವಿದಾಸ ಮೊಗೇರ ವಂದಿಸಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.


Share: