ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶೀಘ್ರದಲ್ಲೆ ನೀರಿನ ದರ ಏರಿಕೆ ಬಗ್ಗೆ ನಿರ್ಧಾರ: ಡಿಸಿಎಂ ಡಿಕೆ ಶಿವಕುಮಾರ್ • ಜಲಮಂಡಳಿ ಖಾಸಗೀಕರಣ ಮಾಡುವುದಿಲ್ಲ

ಶೀಘ್ರದಲ್ಲೆ ನೀರಿನ ದರ ಏರಿಕೆ ಬಗ್ಗೆ ನಿರ್ಧಾರ: ಡಿಸಿಎಂ ಡಿಕೆ ಶಿವಕುಮಾರ್ • ಜಲಮಂಡಳಿ ಖಾಸಗೀಕರಣ ಮಾಡುವುದಿಲ್ಲ

Sat, 24 Aug 2024 23:45:57  Office Staff   S O News

ಬೆಂಗಳೂರು: ಬೆಂಗಳೂರು ಜಲಮಂಡಳಿ ಉಳಿಸಲು ಹಾಗೂ ಅಭಿವೃದ್ದಿಗೊಳಿಸಲು ನೀರಿನ ದರ ಏರಿಕೆ ಅನಿವಾರ್ಯ. ಸದ್ಯದಲ್ಲೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹೇಳಿದರು.

ಇಂದು ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲು ಮುಂಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ, ಯುನೈಟೆಡ್ ನೇಷನ್ಸ್ - ಇನೋವೇಷನ್ಸ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯೂರಿಟಿ ಇನ್ ಬೆಂಗಳೂರು ಸಿಟಿ ಯೋಜನೆಗೆ, ಮಳೆ ನೀರು ಕೊಯ್ಲು ಜಾಗೃತಿ ಹಾಗೂ ಮನೆ ಬಾಗಿಲಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 14 ವರ್ಷಗಳಿಂದ ನೀರಿನ ದರ ಏರಿಕೆ ಮಾಡದೇ ಹಾಗೆಯೇ ಮ್ಯಾನೇಜ್ ಮಾಡಲಾಗುತ್ತಿದೆ. ಆದರೆ ವಿದ್ಯುತ್ ದರ ಸೇರಿದಂತೆ ಎಲ್ಲಾ ದರಗಳು ಏರಿಕೆಯಾಗಿವೆ. ನಗರದ ನಾಗರೀಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜಲಮಂಡಳಿಯ ಕೊಡುಗೆ ಅಪಾರ. ಜಲಮಂಡಳಿ ಸಮರ್ಪಕವಾಗಿ ನಿರ್ವಹಣೆ ಆಗಲು ಹಾಗೂ ಹೊಸ ಪ್ರದೇಶಗಳಿಗೆ ನೀರಿನ ಮತ್ತು ಒಳಚರಂಡಿ ಸೌಲಭ್ಯ ನೀಡಲು ಮಂಡಳಿ ಸುಸ್ಥಿತಿಯಲ್ಲಿ ಇರುವುದು ಅಗತ್ಯ. ಈ ನಿಟ್ಟಿನಲ್ಲಿ ಯಾವುದೇ ಅಡೆತಡೆ ಬಂದರೂ ನೀರಿನ ದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲೂಎಸ್‍ಎಸ್‍ಬಿ, ಬಿಎಂಆರ್‍ಸಿಎಲ್ ಸೇರಿದಂತೆ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ಅಡಿಯಲ್ಲಿ ಇರುವಂತಹ ಸಂಸ್ಥೆಗಳನ್ನು ಒಗ್ಗೂಡಿಸಿ ಒಂದು ಕಂಪನಿ ರಚಿಸಲು ಚಿಂತನೆ ನಡೆಸಲಾಗಿದೆ. ಇದರ ಮೂಲಕ ಕ್ಯಾಪ್ಟಿವ್ ಯೋಜನೆ ಅಡಿಯಲ್ಲಿ ಸೋಲಾರ್ ಹಾಗೂ ಇನ್ನಿತರೆ ವಿಧಾನಗಳ ಮೂಲಕ ವಿದ್ಯುತ್ ಉತ್ಪಾದನೆ ಹಾಗೂ ಖರೀದಿ ಮಾಡಲಾಗುವುದು. ವಿದ್ಯುತ್ ವೆಚ್ಚವನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ  ಡಾ.ವಿ.ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯರಾಮ್, ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.


Share: