ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕುಂಠಿತಗೊಂಡ ವರ್ಚಸ್ಸು ಹಿಂದೆ ಪಡೆಯಲು ಪ್ರಯತ್ನ - ಯಡಿಯೂರಪ್ಪ

ಬೆಂಗಳೂರು: ಕುಂಠಿತಗೊಂಡ ವರ್ಚಸ್ಸು ಹಿಂದೆ ಪಡೆಯಲು ಪ್ರಯತ್ನ - ಯಡಿಯೂರಪ್ಪ

Tue, 05 Jan 2010 03:02:00  Office Staff   S.O. News Service
ಬೆಂಗಳೂರು, ಜನವರಿ 4: ಬಜೆಟ್ ಅಧಿವೇಶನದ ನಂತರ ರಾಜ್ಯ ಮಂತ್ರಿ ಮಂಡಲವನ್ನು ಪೂರ್ಣಪ್ರಮಾಣದಲ್ಲಿ ಪುನರ್ ರಚಿಸಿ ಹಿರಿಯ ಶಾಸಕರು, ಪಕ್ಷ ನಿಷ್ಠರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಸರ್ಕಾರದ ವರ್ಚಸ್ಸು ಹಾಗೂ ಪಕ್ಷದ ಹಿಂದಿನ ಗತವೈಭವವನ್ನು ಮರಳಿ ತರಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಮ್ಮ ಪಕ್ಷದ ಶಾಸಕರಿಗೆ ಅಭಯ ನೀಡಿದ್ದಾರೆ. 

ನಗರದ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್ಸ್‌ನಲ್ಲಿ ಇಡೀ ದಿನ ಶಾಸಕರ ಅಭಿಪ್ರಾಯಗಳನ್ನು ಸಾವಧಾನದಿಂದ ಆಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಮುಂಬರುವ ದಿನಗಳಲ್ಲಿ ವಲಸಿಗರಿಗೆ ನೀಡುತ್ತಿರುವ ಮನ್ನಣೆಯನ್ನು ಕಡಿಮೆ ಮಾಡಿ ಪಕ್ಷ ನಿಷ್ಠರಿಗೆ ಹೆಚ್ಚು ಒತ್ತು ನೀಡುವ ಇಂಗಿನ ವ್ಯಕ್ತಪಡಿಸಿದ್ದಾರೆ. 

ಅದಕ್ಕಾಗಿ ಎಲ್ಲರೂ ಮುಂದಿನ ಬಜೆಟ್ ಅಧಿವೇಶನದವರೆವಿಗೂ ಕಾಯುವ ಮೂಲಕ ಸಹಕಾರ ನೀಡಬೇಕು. ಪಕ್ಷ ಕಟ್ಟಿಬೆಳೆಸಿದ ನಿಷ್ಠರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಈ ಸರ್ಕಾರದ ಅವಧಿಯಲ್ಲಿ ಪಕ್ಷದ ನಿಷ್ಠಾವಂತರಿಗೆ ಮಾನ್ಯತೆ ದೊರೆಯಲಿದೆ ಎಂದು ಹೇಳಿದ್ದಾರೆ. 

ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ಆದರೆ ಅದನ್ನೇ ದೊಡ್ಡದು ಮಾಡಿಕೊಂಡು ಹೋಗುತ್ತಾ ಕೂರುವುದು ಸರಿಯಲ್ಲ. ನಮ್ಮ ಮುಂದೆ ಇನ್ನೂ ಸಾಕಷ್ಟು ದೊಡ್ಡ ದೊಡ್ಡ ಸವಾಲುಗಳಿವೆ. ಅದನ್ನು ಎದುರಿಸಲು ನಿವೇಲ್ಲಾ ನನಗೆ ಹೆಗಲು ಕೊಟ್ಟು ದುಡಿಯಬೇಕು. 

ಮಂತ್ರಿಮಂಡಲದಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಬೇಕು. ಈ ಪ್ರಕ್ರಿಯೆಯನ್ನೂ ಕೂಡ ಬಜೆಟ್ ಅಧಿವೇಶನದ ನಂತರ ನಡೆಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಒಟ್ಟಿನಲ್ಲಿ ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದಿದ್ದಾರೆ. 

ಮಂತ್ರಿ ಮಂಡಲದಲ್ಲಷ್ಟೇ ಅಲ್ಲದೇ ನಿಗಮ ಮಂಡಗಳಿಗಳಲ್ಲೂ ನಿಷ್ಠರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ನಿಗಮ ಮಂಡಳಿಯ ಎಲ್ಲಾ ಅಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದಿದ್ದಾರೆ. 

ಪದೇ ಪದೇ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ ಅಧಿಕಾರ ನಡೆಸುವುದು ಕಷ್ಟವಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ. ಬಹಿರಂಗವಾಗಿ ಆಪಾದನೆಗಳು ಬರುತ್ತಿದ್ದರೆ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. 

ಕ್ಷೇತ್ರದ ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಬಂದು ನೋಡಿ. ಇದು ನಿಮ್ಮ ಸರ್ಕಾರ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ರಾಜ್ಯದಲ್ಲಿ ಇನ್ನೊಂದು ಬಜೆಟ್ ಮಂಡಿಸುವ ಸಮಯ ಬಂದಿದೆ. ಈ ವರ್ಷ ಜಾರಿಗೊಳಿಸಿದ ಯೋಜನೆಗಳ ಮೌಲ್ಯಮಾಪನವೂ ಕೂಡ ಆಗಬೇಕಾಗಿದೆ. ಇನ್ನು ಮುಂದೆ ಬರುವ ಬಜೆಟ್‌ನಲ್ಲಿ ಏನಿರಬೇಕು. ಏನೇನು ಬೇಡ ಎಂಬುದರತ್ತ ಗಮನಹರಿಸಬೇಕಾಗಿದೆ. ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತೇನೆ. 

ಬಜೆಟ್ ಅಧಿವೇಶನದ ನಂತರ ಈ ಶಾಸಕರು ಎತ್ತಿರುವ ಬೇಡಿಕೆಗಳ ಬಗ್ಗೆ ಗಮನಹರಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದಾಗಿ ಇದೇ ಮೂಲಗಳು ತಿಳಿಸಿವೆ. 

ಮುಕ್ತ ಚರ್ಚೆ: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸುಮಾರು ೨೦ ತಿಂಗಳ ನಂತರ ಇದೇ ಮೊದಲ ಬಾರಿಗೆ ಶಾಸಕರು ಇಂದಿನ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 

ಯಡಿಯೂರಪ್ಪ ಹಾಗೂ ಕೆಲ ಸಚಿವರ ಮೇಲಿರುವ ಸಿಟ್ಟನ್ನೂ ಕೂಡ ಕಾರಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಸ ಡಿ.ವಿ. ಸದಾನಂದ ಗೌಡ ಅವರೂ ಕೂಡ ಕೆರಳಿದ ಶಾಸಕರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರೆಂದು ಇದೇ ಮೂಲಗಳು ಹೇಳಿವೆ. 

ರೇಣುಕಾಚಾರ್ಯ ವಿರುದ್ಧ ಅಸಮಾಧಾನ: ಬ್ಲಾಕ್ ಮೇಲ್ ಮಾಡಿರುವ ರೇಣುಕಾಚಾರ್ಯ ಅವರಿಗೆ ಸಚಿವ ಸ್ಧಾನ ದಯಪಾಲಿಸಿರುವ ಬಗ್ಗೆ ಕೆಲ ನಿಷ್ಠಾವಂತ ಶಾಸಕರು ಎತ್ತಿದ ಧನಿಗೆ ಸಾರಿಗೆ ಸಚಿವ ಆರ್. ಅಶೋಕ್, ಕೂಡ ಧನಿಗೂಡಿಸಿದ್ದು ಇಂದಿನ ಶಾಸಕಾಂಗ ಪಕ್ಷದ ಸಭೆಯ ವೈಶಿಷ್ಟ್ಯವಾಗಿತ್ತು. 

ರೇಣುಕಾಚಾರ್ಯ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆಮಾಡಿಕೊಳ್ಳುವ ಮೂಲಕ ಸರ್ಕಾರ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗಿದೆ ಎಂದು ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ, ಇದಕ್ಕೆ ಅಶೋಕ್ ಅವರೂ ಕೂಡ ಧನಿಗೂಡಿಸಿ, ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದು ತಪ್ಪು ಎಂದು ಹೇಳಿದರೆಂದು ಇದೇ ಮೂಲಗಳು ತಿಳಿಸಿವೆ. 


Share: