ಭಟ್ಕಳ, ಸೆಪ್ಟೆಂಬರ್ 30: ಮಳೆಗಾಲ ಕಳೆದರೂ ಮಳೆಯ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ನಗರದ ಜಾಲಿ ಪಂಚಾಯತ್ ಪ್ರದೇಶದ ವ್ಯಾಪ್ತಿಯಲ್ಲಿರುವ ಆಜಾದ್ ನಗರ ಬಡಾವಣೆಯಲ್ಲಿ ವಿವಿಧೆಡೆ ಒಟ್ಟು ಆರು ವಿದ್ಯುತ್ ಕಂಭಗಳು ನೆಲಕ್ಕುರುಳಿದ್ದು ನಿವಾಸಿಗಳಿಗೆ ಅಪಾಯದ ಆಹ್ವಾನ ನೀಡುತ್ತಿದೆ.

ಬುಧವಾರ ಬೆಳಿಗ್ಗೆ ಆಜಾದ್ ನಗರದಲ್ಲಿರುವ ಅಂಜುಮಾನ್ ಆಜಾದ್ ಪ್ರಾಥಮಿಕ ಶಾಲೆಗೆ ಹೊರಳುವ ರಸ್ತೆಯಲ್ಲಿರುವ ವಿದ್ಯುತ್ ಕಂಭ ನೆಲಕ್ಕೆ ಬಿದ್ದಿದ್ದು ಶಾಲಾಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಬಗ್ಗೆ ನಾಗರಿಕರು ಕೂಡಲೇ ಸುದ್ದಿ ಮುಟ್ಟಿಸಿದರಾದರೂ ಒಂಭತ್ತು ಘಂಟೆಯವರೆಗೂ ಕೆ.ಇ.ಬಿ. ಅಥವಾ ಹೆಸ್ಕಾಂ ಸಿಬ್ಬಂದಿ ಆಗಮಿಸದೇ ಇರುವುದು ನಿರ್ಲಕ್ಷ್ಯದ ಪರಮಾವಧಿಯಾಗಿದೆ.
ಕುಸಿದ ಕಂಭದ ಕಾರಣ ವಿದ್ಯುತ್ ತಂತಿಗಳು ನೆಲದ ಮೇಲೆ, ನೆಲದಿಂದ ಒಂದೆರೆಡು ಅಡಿ ಮೇಲಕ್ಕೆ ರಸ್ತೆಯಲ್ಲೆಲ್ಲಾ ಹರಡಿಕೊಂಡಿದ್ದು ಕುತೂಹಲದಿಂದ ಮುಟ್ಟಿದವರಿಗೆ ಸಾವನ್ನು ಎದುರಿಸುವ ತೀರಾ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು.





ಧರೆಗುಳಿದ ಕಂಭಗಳ ಕಾರಣ ಜಾಲಿ ಪಂಚಾಯತ್ ಪ್ರದೇಶದ ಹೆಚ್ಚಿನೆಡೆಗಳಲ್ಲಿ ವಿದ್ಯುತ್ ಸಂಚಾರ ಬಾಧೆಗೊಂಡಿದ್ದು ಕೂಡಲೇ ಇವುಗಳ ದುರಸ್ತಿಗೆ ಕ್ರಮ ಕೈಗೊಂಡಿರುವುದಾಗಿಯೂ ಗುರುವಾರ ಎಂದಿನಂತೆ ವಿದ್ಯುತ್ ಪೂರೈಸಲಾಗುವುದು ಎಂದು ಹೆಸ್ಕಾಂ ಉಪ ಇಂಜಿನಿಯರ್ ಶ್ರೀ ದರ್ಯಾಳ್ ರವರು ತಿಳಿಸಿದ್ದಾರೆ.

ಮಳೆಯಿಂದಾಗಿ ಹಲವೆಡೆ ನೀರು ನಿಂತಿದ್ದು ದುರಸ್ತಿ ಕಾರ್ಯಕ್ಕೆ ಆಡ್ಡಿಯಾಗಿದೆ ಆದರೂ ಗುರುವಾರ ಬೆಳಿಗ್ಗಿನವರೆಗೆ ಎಲ್ಲಾ ಕಂಭಗಳನ್ನು ಸರಿಪಡಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ.