ಮೈಸೂರು, ಮಾ. ೧೧ (ಕರ್ನಾಟಕ ವಾರ್ತೆ) - ರೈತರು, ಕಾರ್ಮಿಕರು ಹಾಗೂ ದಲಿತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಸಲುವಾಗಿ ಪ್ರತಿ ಮಾಹೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಮಟ್ಟದ ಸಭೆಗಳನ್ನು ಆಯಾ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಆಯೋಜಿಸುವಂತೆ ಮೈಸೂರು ಜಿಲ್ಲಾಧಿಕಾರಿ ಶ್ರೀ ಪಿ. ಮಣಿವಣ್ಣನ್ ಸೂಚಿಸಿದ್ದಾರೆ.
ಮಾರ್ಚ್ ೩ರಂದು ಮೈಸೂರು ಜಿಲ್ಲಾ ಪಂಚಾಯತ್ನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳ ಚರ್ಚೆ ಸಲುವಾಗಿ ನಡೆದ ರೈತ ಮುಖಂಡರು ಮತ್ತು ಅಧಿಕಾರಿಗಳ ಸಭೆಯಲ್ಲಿ ಕೆಲವು ರೈತ ಮುಖಂಡರು ಜಿಲ್ಲಾಧಿಕಾರಿಗಳಲ್ಲಿ ತಾಲ್ಲೂಕು ಮಟ್ಟದ ಸಭೆಗಳನ್ನು ಆಯೋಜಿಸುವಂತೆ ಮನವಿ ಮಾಡಿದ ಕಾರಣ ಜಿಲ್ಲಾಧಿಕಾರಿಗಳು ಮೇಲ್ಕಂಡಂತೆ ಸೂಚಿಸಿದ್ದಾರೆ.
ಇನ್ನುಮುಂದೆ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತೀ ಮಾಹೆ ಒಂದು ಸಭೆಯನ್ನು ಆಯಾ ತಾಲ್ಲೂಕಿನ ರೈತ ಮುಖಂಡರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ ಮುಖಂಡರು, ಇನ್ನಿತರೆ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಸಭೆ ನಡೆಸುವಂತೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸರ್ಕಾರಿ, ನಿಗಮ, ಮಂಡಳಿಗಳ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪ್ರದರ್ಶನಕ್ಕೆ ಆದೇಶ
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರ, ನಿಗಮ, ಮಂಡಳಿಗಳ ವತಿಯಿಂದ ಕೈಗೊಳ್ಳಲಾಗುವ ರೂ.೧.೦೦ ಲಕ್ಷ ಮೀರಿದ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀ ಪಿ. ಮಣಿವಣ್ಣನ್ ಸೂಚಿಸಿದ್ದಾರೆ.
ಮಾರ್ಚ್ ೨ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಯಾವುದೇ ಸರ್ಕಾರಿ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಮೇಲ್ಕಂಡ ಮಾಹಿತಿ ಪ್ರದರ್ಶಿಸುತ್ತಿಲ್ಲದಿರುವ ಬಗ್ಗೆ ಪ್ರಸ್ತಾಪಿಸಿದ ಕಾರಣ ಜಿಲ್ಲಾಧಿಕಾರಿಗಳು ಮೇಲಿನಂತೆ ಸೂಚಿಸಿದ್ದಾರೆ.