ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆ ಸಂತ್ರಸ್ತರ ಬ್ಯಾಂಕ್ ಸಾಲ ವಸೂಲಿಗೆ ತಾತ್ಕಾಲಿಕ ತಡೆ - ಮುಖ್ಯಮಂತ್ರಿ

ಬೆಂಗಳೂರು: ನೆರೆ ಸಂತ್ರಸ್ತರ ಬ್ಯಾಂಕ್ ಸಾಲ ವಸೂಲಿಗೆ ತಾತ್ಕಾಲಿಕ ತಡೆ - ಮುಖ್ಯಮಂತ್ರಿ

Fri, 16 Oct 2009 07:36:00  Office Staff   S.O. News Service
ಬೆಂಗಳೂರು, ಅ.೧೫: ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಲ್ಲಿನ ರೈತರು ವಿವಿಧ ಬ್ಯಾಂಕುಗಳಲ್ಲಿ ಪಡೆದಿರುವ ಎಲ್ಲ ರೀತಿಯ ಸಾಲವನ್ನು ಸದ್ಯಕ್ಕೆ ವಸೂಲಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಯೊಂದಿಗೆ ಸಭೆ ನಡೆಸಿದ ನಂತರ ಏರ್ಪಡಿಸಿದ್ಧ ಅವರು ಮಾತನಾಡಿದರು.

ನೆರೆಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ಪಡೆದಿರುವ ಸಾಲವನ್ನು ಮರುಪಾವತಿಗೆ ಒತ್ತಾಯಿಸಬಾರದು ಎಂದು ಸಭೆಯಲ್ಲಿ ಭಾಗವಹಿಸಿದ್ಧ ವಿವಿಧ ಬ್ಯಾಂಕುಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಬ್ಯಾಂಕುಗಳ ಮುಖ್ಯಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ನೆರೆಪೀಡಿತ ಪ್ರದೇಶದಲ್ಲಿನ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು, ಸಂತ್ರಸ್ತರಿಗೆ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಹೊಸದಾಗಿ ಸಾಲ ಸೌಲಭ್ಯ ಒದಗಿಸಲು ಬ್ಯಾಂಕುಗಳು ಒಪ್ಪಿಗೆ ನೀಡಿವೆ. ಇದಲ್ಲದೆ ಆ ಭಾಗದಲ್ಲಿ ಸಾಲ ನೀಡಲು ಶಿಬಿರವನ್ನು ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಸಂತ್ರಸ್ತರು ಪಡೆದಿರುವ ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಯಾಗಿ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಯಾಗಿ ಪರಿವರ್ತಿಸಲು ಕೂಡ ಬ್ಯಾಂಕುಗಳು ಒಪ್ಪಿಗೆ ನೀಡಿವೆ. ಅಲ್ಲದೆ ಸಂತ್ರಸ್ತರು ಮನೆಗಳನ್ನು ಕಟ್ಟಿಕೊಳ್ಳಲು ೫೦ ಸಾವಿರ ರೂ.ವರೆಗೂ ಶೇ.೪ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ಒಪ್ಪಿರುವುದಾಗಿ ಯಡಿಯೂರಪ್ಪ ತಿಳಿಸಿದರು.

ಸಂತ್ರಸ್ತರ ಪರಿಹಾರಕ್ಕಾಗಿ ದಾನಿಗಳು ನೀಡುವ ಚೆಕ್ ಹಾಗೂ ಡಿಡಿಗಳಿಗೆ ಯಾವುದೆ ಶುಲ್ಕ ವಿಧಿಸಬಾರದು. ಸಂತ್ರಸ್ತರಿಗೆ ನೀಡುವ ಪರಿಹಾರದ ಚೆಕ್‌ಅನ್ನು ಬ್ಯಾಂಕಿನಲ್ಲಿ ಖಾತೆ ಇಲ್ಲವರಿಗೂ ಹಣ ನೀಡಬೇಕು. ಪರಿಹಾರದ ಚೆಕ್‌ಗಳಿಗೆ ತಡಮಾಡದೆ ಹಣ ನೀಡಬೇಕೆಂದು ಸಭೆಯಲ್ಲಿ ಸೂಚಿಸಿದ್ದು, ಇದಕ್ಕೆ ಬ್ಯಾಂಕುಗಳ ಮುಖ್ಯಸ್ತರು ಒಪ್ಪಿರುವುದಾಗಿ ಯಡಿಯೂರಪ್ಪ ಹೇಳಿದರು.

ನೆರೆಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲು ಬ್ಯಾಂಕಿನ ನೌಕರರ ಒಂದು ದಿನದ ವೇತನವನ್ನು ನೀಡಲು ಒಪ್ಪಿಗೆ ನೀಡಲಿದ್ದಾರೆ. ಇದಲ್ಲದೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಬ್ಯಾಂಕುಗಳ ಮುಖ್ಯಸ್ತರು ಭರವಸೆ ನೀಡಿದ್ದಾರೆ ಎಂದು ಯಡಿಯೂಪ್ಪ ತಿಳಿಸಿದರು.

ಸಭೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಎಚ್‌ಎಸ್‌ಬಿಸಿ, ಎಸ್‌ಬಿ‌ಎಂ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಬ್ಯಾಂಕುಗಳ ಮುಖ್ಯಸ್ಥರು ಭಾಗವಹಿಸಿದ್ದರು ಎಂದು ಯಡಿಯೂರಪ್ಪ ಹೇಳಿದರು

Share: