ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕಿಡಿಗೇಡಿಗಳಿಗೆ ಕಗ್ಗಂಟಾದ ಹಿಂದೂ-ಮುಸ್ಲಿಮ್‌ ಸಹಿಷ್ಣುತೆ

ಮಂಗಳೂರು: ಕಿಡಿಗೇಡಿಗಳಿಗೆ ಕಗ್ಗಂಟಾದ ಹಿಂದೂ-ಮುಸ್ಲಿಮ್‌ ಸಹಿಷ್ಣುತೆ

Fri, 12 Feb 2010 04:01:00  Office Staff   S.O. News Service

ಮಂಗಳೂರು, ಫೆಬ್ರವರಿ ೧೨: ಸುರತ್ಕಲ್‌ನಲ್ಲಿ ಗಲಭೆ ಎಬ್ಬಿಸುವುದು ಸುಲಭ ಎಂದು ಕಿಡಿಗೇಡಿಗಳು ಭಾವಿಸಿರುವುದು ಈಗ ಸುಳ್ಳಾಗಿದೆ. ಕೆಲವು ವರ್ಷಗಳ ಹಿಂದೆ ಓರ್ವ ಮುಸ್ಲಿಂ ಅಥವಾ ಹಿಂದೂ ವ್ಯಕ್ತಿಗೆ ಇಲ್ಲಿ ವಿನಾಕಾರಣ ಹಲ್ಲೆ ಮಾಡಿದರೆ ಕೋಮುಗಲಭೆ ಸ್ಫೋಟಗೊಳ್ಳುತ್ತಿತ್ತು. ಸಾರಿಗೆ, ಅಂಗಡಿ ಮುಂಗಟ್ಟು ಬಂದ್‌ ಆಗುತ್ತಿದ್ದವು. ಆದರೆ ಬರುಬರುತ್ತಾ ಇಲ್ಲಿನ ಜನತೆ ಹೀಗೆಲ್ಲಾ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿದುಕೊಂಡಿದ್ದಾರೆ. ಈ ಹಿಂದೆ ನಡೆದ ಕೋಮುಗಲಭೆಯ ದಳ್ಳುರಿಯಿಂದ ಪರಸ್ಪರರೂ ಈಗಾಗಲೇ ಸಾಕಷ್ಟು ನೊಂದು ಕೊಂಡಿದ್ದಾರೆ.

 

ಇತ್ತೀಚೆಗೆ ಇಲ್ಲಿ ದಿನಂಪ್ರತಿ ಎಂಬಂತೆ ನಡೆಯುವ ಅಹಿತಕರ ಘಟನೆಗಳು ಸಾಮಾನ್ಯವಾದವುಗಳೇನಲ್ಲ. ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಗಲಾಟೆ, ಈದ್ಗಾ ಮೈದಾನದ ಗೋಡೆ ಹಾರಿ ಅಲ್ಲಿನ ಕಟ್ಟೆಯ ಮೇಲೆ ದೀಪವಿಟ್ಟು ಹೂ ಹಾಕಿ ಬಂದ ಘಟನೆ, ದೈವಸ್ಥಾನವೊಂದರ ಬಳಿ ದನದ ತಲೆ ಬುರುಡೆ ಇಟ್ಟ ಘಟನೆ, ಮಸೀದಿ ಬಳಿ ಹಂದಿ ಮಾಂಸ ಹಾಕಿದ ಘಟನೆ. ಇವೆಲ್ಲಾ ಕೆಲವು ವರ್ಷಗಳ ಹಿಂದೆ ನಡೆಯುತ್ತಿದ್ದರೆ ಒಂದೊಂದು ಘಟನೆಯ ಹಿಂದೆಯೂ ಒಂದಷ್ಟು ಗಲಭೆ, ಸೊತ್ತುಹಾನಿ, ಪ್ರಾಣ ಹಾನಿ ನಡೆಯುತ್ತಿದ್ದವು. ಆದರೆ ಈ ಬಾರಿ ಇಲ್ಲಿನ ಜನತೆ ಪ್ರತಿಯೊಂದು ಘಟನೆಯಲ್ಲೂ ತಾಳ್ಮೆ, ಸಹಿಷ್ಣುತೆ ಪ್ರಕಟಿಸಿದ್ದಾರೆ. ಪೊಲೀಸರು ಭದ್ರತೆ ಒದಗಿಸಿದ್ದರೂ ಮನಸ್ಸು ಮಾಡಿದರೆ ಅವರ ಕಣ್ಣು ತಪ್ಪಿಸಿ ಗಲಭೆ ಎಬ್ಬಿಸುವುದು ಸುರತ್ಕಲ್‌ನಂಥ ಸೂಕ್ಷ್ಮ ಪ್ರದೇಶದಲ್ಲಿ ಕಷ್ಟದ ಕೆಲಸವೇನಲ್ಲ.

 

ಸುರತ್ಕಲ್‌ ಪರಿಸರದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಗಮನಿಸಿದಾಗ ಇದನ್ನೆಲ್ಲಾ ಹಿಂದೂ ಅಥವಾ ಮುಸ್ಲಿಂ ಪಂಗಡದ ವ್ಯಕ್ತಿಗಳು ಮಾಡಿದ್ದಾರೆ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈ ಘಟನೆಯ ಹಿಂದೆ ಯಾವುದೋ ಒಂದು ಸಂಘಟನೆ, ರಾಜಕೀಯ ಪಾತ್ರ ವಹಿಸುತ್ತಿದೆಯೇ ಎಂಬ ಸಂಶಯವೂ ಬಾರದೇ ಇರುವುದಿಲ್ಲ. ಈ ಕಿಡಿಗೇಡಿಗಳು ಖಂಡಿತವಾಗಿಯೂ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಎಂದು ಭಾಸವಾಗುತ್ತಿದೆ. ಸುಲಭವಾಗಿ ಹಿಂದೂ-ಮುಸ್ಲಿಮರ ಮಧ್ಯೆ ಕಿಡಿ ಹುಟ್ಟಿಸಿ ಗಲಭೆ ಭುಗಿಲೆಬ್ಬಿಸುವ ತಂತ್ರ ಇದಾಗಿರಬಹುದೇ?

 

 

ಯಾಕೆಂದರೆ ಒಂದು ಧರ್ಮದ ವ್ಯಕ್ತಿಗಳು ಇನ್ನೊಂದು ಧರ್ಮದ ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸಿದಾಗ ಅಥವಾ ಇನ್ನೊಂದು ಧರ್ಮದವರು ಪ್ರತಿಯಾಗಿ ಇದನ್ನೇ ಮಾಡಿದಾಗ ಈ ಘಟನೆಯ ಹಿಂದೆ ಸಾಕಷ್ಟು ಸಂಖ್ಯೆಯ ಬೆಂಬಲಿಗರು ಇದ್ದಿದ್ದರೆ ಎಲ್ಲಿಯಾದರೂ ಒಂದು ಕಡೆ ಗಲಭೆ ಸೃಷ್ಟಿಯಾಗಿ ಸಾರ್ವತ್ರಿಕವಾಗಿ ಹರಡುತ್ತಿತ್ತು. ಆದರೆ ಹಾಗಾಗಲಿಲ್ಲ. ಎರಡೂ ಧರ್ಮದ ಜನರು ಎಲ್ಲಾ ಕಡೆ ತಾಳ್ಮೆ ವಹಿಸಿದ್ದು ಕಂಡರೆ ಇಂತಹಾ ಘಟನೆಗಳನ್ನು ಯಾರೂ ಇಷ್ಟಪಡುವುದಿಲ್ಲ ಎಂಬುದು ತಿಳಿದು ಬರುತ್ತದೆ. ಹಾಗಿರುವಾಗಿ ಖಂಡಿತವಾಗಿಯೂ ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸುವ ಷಡ್ಯಂತ್ರದ ಭಾಗವಾಗಿ ಈ ಎಲ್ಲಾ ಘಟನೆಗಳು ನಡೆಯುತ್ತಿದೆ ಎಂಬುದು ನಿರ್ವಿವಾದ.

 


Share: