ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಲವ್ ಜಿಹಾದ್ - ನಿಜಾಂಶ ತಿಳಿದುಕೊಳ್ಳಲು ಪ್ರಕರಣ ಸಿಐಡಿಗೆ

ಬೆಂಗಳೂರು: ಲವ್ ಜಿಹಾದ್ - ನಿಜಾಂಶ ತಿಳಿದುಕೊಳ್ಳಲು ಪ್ರಕರಣ ಸಿಐಡಿಗೆ

Tue, 27 Oct 2009 03:28:00  Office Staff   S.O. News Service
ಬೆಂಗಳೂರು, ಅ.26 :ಕೇರಳದಂತೆ ನಮ್ಮ ರಾಜ್ಯದಲ್ಲೂ ನಡೆಯುತ್ತಿದೆ ಎನ್ನಲಾದ ‘ಲವ್ ಜಿಹಾದ್’ಅನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಿ‌ಐಡಿ ತನಿಖೆಗೆ ಒಪ್ಪಿಸಿದೆ.

ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆಯೇ ಎಂಬುದರ ಸತ್ಯಾಸತ್ಯ ಪತ್ತೆಹಚ್ಚಿ ೧೫ ದಿನದಲ್ಲಿ ಸಮಗ್ರ ತನಿಖಾ ವರದಿ ನೀಡುವಂತೆ ಸಿ‌ಐಡಿ ಡಿಜಿಪಿಗೆ ಸೂಚಿಸಿದೆ. 

ಮುಸ್ಲಿಂ ಯುವಕರು ಬೇರೆ ಧರ್ಮದ ಯುವತಿಯರನ್ನು ಪ್ರೇಮಿಸಿ ಮದುವೆಯಾಗಿ ತಮ್ಮ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೆ ಎನ್ನಲಾದ ಲವ್ ಜಿಹಾದ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಹೈಕೋರ್ಟ್, ಈ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲವ್ ಜಿಹಾದ್ ಬಗ್ಗೆ ಸಿ‌ಐಡಿ ತನಿಖೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿದೆ. 
 
ಸೋಮವಾರ ವಿಧಾನಸೌಧದಲ್ಲಿ ಗೃಹ ಸಚಿವ ಡಾ|ವಿ.ಎಸ್. ಆಚಾರ್ಯ ಅವರ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಚಾರ್ಯ, ಲವ್ ಜಿಹಾದ್ ನಡೆಯುತ್ತಿದ್ದಲ್ಲಿ ಅದರ ಹಿಂದಿರುವ ಸಂಘಟನೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚುವಂತೆಯೂ ನಿರ್ದೇಶನ ನೀಡಲಾಗಿದೆ. ಸಮಗ್ರ ವರದಿ ಕೈಸೇರಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿ‌ಐಡಿ ಡಿ‌ಐಜಿ ಅವರು ಲವ್ ಜಿಹಾದ್ ಪಿಡುಗಿನ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಲಿದ್ದು, ಇದನ್ನು ತಡೆಗಟ್ಟುವ ಬಗ್ಗೆ ಮಾರ್ಗೋಪಾಯಗಳನ್ನೂ ಸೂಚಿಸಲಿದ್ದಾರೆ. ಯುವತಿಯರನ್ನು ಮತಾಂತರಗೊಳಿಸುವ ಸಲುವಾಗಿಯೇ ಪ್ರೇಮಿಸಲಾಗುತ್ತಿದೆಯೇ, ಇದಕ್ಕೆ ಯಾವುದಾದರೂ ಸಂಘಟನೆಗಳು ಉತ್ತೇಜನ ನೀಡುತ್ತಿವೆಯೇ, ಹಣಕಾಸು ಒದಗಿಸುತ್ತಿವೆಯೇ ಎಂಬುದರ ಬಗ್ಗೆಯೂ ತನಿಖೆ ಬೆಳಕು ಚೆಲ್ಲಲಿದೆ. 

ಹೈಕೋರ್ಟ್ ಆದೇಶ: ಇತ್ತೀಚೆಗೆ ತಮ್ಮ ಪುತ್ರಿ ಮುಸ್ಲಿಂ ಯುವಕನೊಂದಿಗೆ ಕಣ್ಣೂರಿಗೆ ಹೋಗಿದ್ದು, ಆಕೆಯನ್ನು ಮದ್ರಸಾದಲ್ಲಿ ಇಡಲಾಗಿದೆ. ಆದ್ದರಿಂದ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಕೋರಿ ಚಾಮರಾಜನಗರದ ಸೆಲ್ವರಾಜ್ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದರು. ರಾಜ್ಯದಲ್ಲಿ ಇತ್ತೀಚೆಗೆ ಇತರ ಧರ್ಮದ ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿ ಕೇರಳಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಜತೆಗೆ ಇಂತಹ ಪ್ರಕರಣವನ್ನು ಲವ್ ಜಿಹಾದ್ ಎಂದು ಪರಿಗಣಿಸಿ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿರುವುದನ್ನೂ ವಿವರಿಸಿದ್ದರು. ಮೇಲಾಗಿ ಕೇರಳದಲ್ಲಿ ಲವ್ ಜಿಹಾದ್ ಎಂದು ಪರಿಗಣಿಸಿದ್ದ ಪ್ರಕರಣಗಳಲ್ಲಿ ಮುಸ್ಲಿಂ  ಯುವಕರನ್ನು ಮದುವೆಯಾಗಿದ್ದ ಇಬ್ಬರು ಹಿಂದೂ ಹುಡುಗಿಯರು ಇದ್ದ ಮದ್ರಸಾ ಮತ್ತು ಚಾಮರಾಜನಗರದ ಸೆಲ್ವರಾಜ್ ಪುತ್ರಿ ಇದ್ದ ಮದ್ರಸಾಗಳು ಒಂದೇ ಆಗಿತ್ತು ಎಂಬುದನ್ನು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು.


ಸೌಜನ್ಯ: ಕನ್ನಡಪ್ರಭ.


Share: