ಮಂಗಳೂರು ಪ್ರಥಮ ಕಮಿಷನರಾಗಿ ಸೀಮಂತ್‌ಕುಮಾರ್ ಅಧಿಕಾರ ಸ್ವೀಕಾರ
ಮಂಗಳೂರು, ಎ.30: ರಾಜ್ಯದ 4ನೆ ಕಮಿಷನರೇಟ್ ಆಗಿರುವ ಮಂಗಳೂರಿನ ಪ್ರಪ್ರಥಮ ಕಮಿಷನರ್ ಆಗಿ ಸೀಮಂತ್ ಕುಮಾರ್‌ಸಿಂಗ್ ಪ್ರಭಾರ ಕಮಿಷನರ್ ಆಗಿದ್ದ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್‌ರಿಂದ ಶುಕ್ರವಾರ ಐಜಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಪೊಲೀಸ್ ವ್ಯವಸ್ಥೆಯ ದಕ್ಷತೆ ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಬೆಂಗಳೂರಿನ ನಂತರ ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಮಿಷನರೇಟ್ ಯಶಸ್ವಿಯಾಗಿದೆ. ಮಂಗಳೂರು ಹೊಸ ದಾಗಿ ಕಮಿಷನರೇಟ್ ಆಗಿದ್ದು, ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಪೊಲೀಸ್ ಬಲ ಇನ್ನಷ್ಟೇ ಬರಬೇಕಾಗಿದೆ. ಅಪರಾಧಗಳನ್ನು ಮಟ್ಟ ಹಾಕುವ ಸಲುವಾಗಿ ಹೊಸ ವಿಭಾಗಗಳ ಅಗತ್ಯವಿದ್ದರೆ ತೆರೆಯಲಾಗುವುದು ಎಂದರು.
ಡಿಸಿಪಿಯ ಒಂದು ಸ್ಥಾನಕ್ಕೆ ನೇಮಕ ವಾಗಿದ್ದು, ಇನ್ನೆರೆಡು ಸ್ಥಾನ ತುಂಬಲಾಗುವುದು. ನಗರದ ಟ್ರಾಫಿಕ್ ಸಮಸ್ಯೆ ಅರಿತು ಅದಕ್ಕೆ ಪರಿಹಾರ ಕಲ್ಪಿಸಲಾಗುವುದು ಎಂದು ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು. ಈ ಸಂದರ್ಭ ಡಿಸಿಪಿ ಆರ್.ರಮೇಶ್ ಉಪಸ್ಥಿತರಿದ್ದರು.