ಬೆಂಗಳೂರು,ಏ,೧೬:ಗೋಕರ್ಣ ದೇವಸ್ತಾವನ್ನು ರಾಮಚಂದ್ರಪುರ ಮಠಕ್ಕೆ ಹಸ್ತಾಂತರಿಸಿದ ವಿವಾದದಿಂದ ಕೆಂಗೆಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇನ್ನು ಮುಂದೆ ಯಾವುದೇ ದೇವಾಲಯಗಳನ್ನು ಮಠ ಇಲ್ಲವೆ ಖಾಸಗಿ ಸಂಸ್ಧೆಗಳಿಗೆ ನೀಡದಿರಲು ನಿರ್ಧರಿಸಿದ್ದಾರೆ.
ತುಮಕೂರು ಜಿಲ್ಲೆಯ ಎಡೆಯೂರು ಸಿದ್ಧಲಿಂಗೇಶ್ವರ, ಉಡುಪಿಯ ಶ್ರೀಕೃಷ್ಣ ದೇವಾಲಯ, ಗುಲ್ಬರ್ಗಾದ ಗಾಣಗಾಪುರ, ಉಡುಪಿಯ ಅಂಬಾಲಪಾಡಿ ಹಾಗೂ ಆನೆಗೊಂದಿ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಹಸ್ತಾಂತರಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿತ್ತು.
ಗೋಕರ್ಣ ದೇವಸ್ತಾನವನ್ನು ಹಸ್ತಾಂತರಿಸಿದ ನಂತರ ರಾಜ್ಯದ ಸುಮಾರು ೪೫ ದೇವಾಲಯಗಳನ್ನು ತಮ್ಮ ವಶಕ್ಕೆ ನೀಡುವಂತೆ ವಿವಿಧ ಮಠಗಳು ಹಾಗೂ ಖಾಸಗಿ ಸಂಸ್ಧೆಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದವು. ಇವುಗಳನ್ನು ಪರಿಶೀಲಿಸಿದ ಕಂದಾಯ ಇಲಾಖೆ ಈ ಪೈಕಿ ಐದು ದೇವಾಲಯಗಳನ್ನು ಹಸ್ತಾಂತರಿಸಬಹುದೆಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಮಚಂದ್ರಪುರ ಮಠಕ್ಕೆ ದೇವಾಲಯ ಹಸ್ತಾಂತರಿಸಿದ ನಂತರ ತೀವ್ರ ವಿವಾದ ಸೃಷ್ಟಿಯಾಗಿದೆ. ಪ್ರಗತಿಪರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಿರುವಾಗ ಹಸ್ತಾಂತರ ಮಾಡಿದರೆ ಮತ್ತಷ್ಟು ವಿವಾದಗಳಿಗೆ ಕಾರಣವಾಗಬಹುದು.
ಮಠಮಂದಿರಗಳು ಕೂಡ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತವೆ. ಈ ವಿಚಾರದಲ್ಲಿ ಸರ್ಕಾರ ಮುಂದಡಿ ಇಟ್ಟರೆ ಮಠಾಧೀಶರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಗೋಕರ್ಣದೇವಸ್ತಾನಕ್ಕೆ ಇದನ್ನು ನಿಲ್ಲಿಸೋಣ. ಮುಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಬೇಡ ಎಂಬ ನಿಲುವಿಗೆ ಯಡಿಯೂರಪ್ಪ ಬಂದಿದ್ದಾರೆ.
ಇದಲ್ಲದೇ ಇತ್ತೀಚೆಗೆ ರಾಜ್ಯ ಹೈಕೋರ್ಟ್‌ನ ಗೋಪಾಲಗೌಡ ನೇತೃತ್ವದ ನ್ಯಾಯಪೀಠ, ಗೋಕರ್ಣ ದೇವಸ್ತಾನ ಸಾರ್ವಜನಿಕ ಸ್ವತ್ತು ಎಂದು ತೀರ್ಪು ನೀಡಿ, ಸರ್ಕಾರಕ್ಕೆ ತೀವ್ರ ಮುಖಭಂಗವಾಗುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ದೇವಸ್ತಾನಗಳನ್ನು ಹಸ್ತಾಂತರಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.