ಹಾಸನ, ಮಾ.೧೫- ಹಾಸನದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿಂದು ಪದವಿ ಪ್ರಧಾನ ಸಮಾರಂಭ ನಡೆಯಿತು.
ಕಾಲೇಜಿನ ೭೫ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಹಾಗೂ ೨೪ ಸ್ನಾತಕ ಪದವಿಧರರಿಗೆ ಈ ಸಂದರ್ಭದಲ್ಲಿ ಪದವಿ ಪ್ರಧಾನ ಮಾಡಲಾಯಿತು.
ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಮೌಲ್ಯ ಮಾಪನ ವಿಭಾಗದ ಕುಲಸಚಿವ ಡಾ.ಸಚ್ಚಿದಾನಂದ, ಪದವಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವ ವೈದ್ಯ ಪದ್ದತಿಯಲ್ಲಿ ಪದವಿ ಪಡೆಯುತ್ತಾರೋ ಅದರಲ್ಲಿಯೇ ಹೆಚ್ಚು ಆಸಕ್ತಿ ತೋರಿ ಸಮಾಜಕ್ಕೆ ಉಜ್ವಲ ಕೊಡುಗೆ ನೀಡಬೇಕೆಂದು ಪದವಿ ಪಡೆದ ವೈದ್ಯರಿಗೆ ಕರೆ ನೀಡಿದರು.
ವೈದ್ಯರಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಇದೊಂದು ಸೇವೆ ಎನ್ನುವ ಪರಿಪಾಠ ಹೊಂದಿ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ತಾನಾಗಿಯೇ ಹುಡುಕಿ ಬರಲಿದೆ ಎಂದು ಕಿವಿಮಾತು ಹೇಳಿದರು.
ನಾಡಿನ ಹೆಸರಾಂತ ಹೋಮಿಯೋ ಪತಿ ತಜ್ಞ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ಆಯುರ್ವೇದ ವೈದ್ಯ ವಿಧಾನ ಪುರಾತನ ಕಾಲದ ಇತಿಹಾಸ ಹೊಂದಿದೆ. ಈಗ ಆಯುರ್ವೇದದ ಬಗ್ಗೆ ಜನರಲ್ಲಿ ಬೇಡಿಕೆ ಹೆಚ್ಚುತ್ತಿದೆ. ಹಾಗೆಯೇ ಹೋಮಿಯೋಪತಿ ಚಿಕಿತ್ಸೆ ಕೂಡ ವೈದ್ಯ ಪದ್ದತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ಉಪ ಪ್ರಾಂಶುಪಾಲ ಡಾ.ಮುರುಳಿಧರ ಪೂಜಾರ್ ಉಪಸ್ಥಿತರಿದ್ದರು.