ಭಟ್ಕಳ, ಡಿಸೆಂಬರ್ 17:ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್‌ರಿಗೆ ಜಿಲ್ಲಾ ಅಹಿಂದ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಭಟ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಹಿಂದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಮಲಾಕರ ಗೋಕರ್ಣ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಎರಡೂ ಕ್ಯಾಭಿನೆಟ್ ದರ್ಜೆ ಸಚಿವರನ್ನು ಜಿಲ್ಲೆ ಹೊಂದಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಪ್ರತಿಪಾದಿಸಿದರು. ಪಕ್ಕದ ಗೋವಾದಲ್ಲಿ ಪ್ರಸಿದ್ಧ ಮಾಂಡವಿ ಬ್ರಿಡ್ಜಗೆ ಪರ್‍ಯಾಯವಾಗಿ ಹೊಸದೊಂದು ಬ್ರಿಡ್ಜ ನಿರ್ಮಾಣವಾಗಿದೆ. ಆದರೆ ಜಿಲ್ಲೆಯನ್ನು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹೊಂಡಮಯವಾಗಿದ್ದರೂ ಯಾರೂ ಆ ಕುರಿತು ಲಕ್ಷ್ಯ ವಹಿಸುತ್ತಿಲ್ಲ. ಉದ್ಯೋಗಕ್ಕಾಗಿ ಜಿಲ್ಲೆಯ ಜನರು ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆಯೇ ಸಿದ್ದಾರಾಮಯ್ಯನವರು ಮುಖ್ಯಮಂತ್ರಿಯಾಗಬೇಕಾಗಿತ್ತು ಎಂದ ಅವರು ಇದೀಗ ದೇವೇಗೌಡರು ಆ ಸಂಬಂಧ ನೀಡಿರುವ ಬೆಂಬಲದ ಹಿಂದೆ ಆ ಕೊರತೆಯನ್ನು ನೀಗಿಸುವ ಪ್ರಯತ್ನವಿದೆ ವಿಶ್ವೇಷಿಸಿದರು. ಯಾವುದೇ ಭ್ರಷ್ಟಾಚಾರದ ಆರೋಪ ವಿಲ್ಲದೇ ಹೋದರೂ ಏಕೈಕ ಮಹಿಳಾ ಸಚಿವೆಯನ್ನು ಸರಕಾರದಿಂದ ಕಿತ್ತೊಗೆಯಲಾಗಿದೆ. ಆದರೆ ರೆಡ್ಡಿ ಪರಿವಾರದ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದರೂ ಅವರಿಂದ ರಾಜಿನಾಮೆ ಪಡೆಯುವ ತಾಕತ್ತು ಸರಕಾರಕ್ಕಿಲ್ಲ ಎಂದು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಅಜಿತ್ ಬಂಡಿಕೇರಿ, ಮಕ್ಸೂದ್ ಅಹ್ಮದ್ ಶೇಕ್, ಜಯಂತ ನಾಯ್ಕ, ಎಚ್.ಎಸ್.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.