ಭಟ್ಕಳ, ಸೆಪ್ಟೆಂಬರ್ 30: ಜಿಲ್ಲಾ ಪಂಚಾಯತ ಅಧ್ಯಕ್ಷರ ಆಯ್ಕೆಯ ಗೊಂದಲಕ್ಕೆ ಇತಿಶ್ರೀ ಹಾಡಲು ಮುರುಡೇಶ್ವರ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಕರೆಯಲಾದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಭೆಯ ಪ್ರಾರಂಭದಲ್ಲಿಯೇ ಕೋಲಾಹಲ ಸೃಷ್ಟಿಯಾಗಿ, ಸಭೆ ಮುಂದೂಡಲ್ಪಟ್ಟ ಘಟನೆ ಬುಧವಾರ ನಡೆದಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ ಸೇರಿದಂತೆ ವಿವಿಧ ಕಡೆಯಿಂದ ಬಂದಂತಹ ಕಾಂಗ್ರೆಸ್ ಕಾರ್ಯಕರ್ತರು ಶಿರಸಿ ಸಿದ್ದಾಪುರ ಮಾಜಿ ಶಾಸಕ ಗೋಪಾಲ ಕಾನಡೆ, ಕೆಪಿಸಿಸಿ ಸದಸ್ಯ ದೀಪಕ ಹೊನ್ನಾವರ ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷ ಎಲ್.ವಿ. ಶ್ಯಾನಭಾಗ ನೇತೃತ್ವದಲ್ಲಿ ಸಭಾಗೃಹಕ್ಕೆ ನುಗ್ಗಿ ಜಿಲ್ಲಾ ಕಾಂಗ್ರೆಸ್ ಪರ ಹಾಗೂ ವಿರೋಧಿ ಘೋಷಣೆಯನ್ನು ಮೊಳಗಿಸಿದರು. ಕುರ್ಚಿ ಹಿಡಿದೆತ್ತಿ ಕುಸ್ತಿಗೆ ಮುಂದಾದ ಪ್ರಸಂಗವು ಒಂದು ಹಂತದಲ್ಲಿ ನಡೆದು ಹೋಯಿತು. ಪೊಲೀಸರ ಮಧ್ಯೆ ಪ್ರವೇಶದೊಂದಿಗೆ ಕೈ ಮೀರಿ ಹೋಗುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ ಬಾಯಿ ಕೆಲಸ ಮುಂದುವರೆದಿರುವುದು ಕಂಡು ಬಂತು.

ಜಿಲ್ಲಾ ಪಂಚಾಯತ ಅಧ್ಯಕ್ಷರ ಆಯ್ಕೆಯ ಸಂಬಂಧ ಕರೆಯಲಾದ ಸದಸ್ಯರ ಸಭೆಯನ್ನು ಮುಗಿಸಿ, ಕಾರ್ಯಕಾರಿ ಸಭೆ ನಡೆಸಲು ಮಧ್ಯಾಹ್ನ 3.30ರ ಸುಮಾರಿಗೆ ನಾಯಕರು ಆಗಮಿಸುವ ಪೂರ್ವದಲ್ಲಿಯೇ ಕಾರ್ಯಕರ್ತರು ಸಭಾಗೃಹದ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದರು. ಸಭೆಯ ಉಸ್ತುವಾರಿಯನ್ನು ವಹಿಸಿದ್ದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ ಹೆಗಡೆಯವರೊಂದಿಗೆ ವೇದಿಕೆ ಏರಿ ಆಹ್ವಾನಿತರಲ್ಲದವರು ಹೊರಗೆ ಹೋಗುವಂತೆ ಸೂಚಿಸಿದ್ದು, ವಿರೋಧಿ ಬಣದ ಕಾರ್ಯಕರ್ತರನ್ನು ಕೆರಳುವಂತೆ ಮಾಡಿತು. ಗೋಪಾಲ ಕಾನಡೆ ನೇತೃತ್ವದಲ್ಲಿ ತಿರುಗಿ ಬಿದ್ದ ಕಾರ್ಯಕರ್ತರು, ಪಕ್ಷದ ನಾಯಕರುಗಳಿಗೆ ಈ ಹಿಂದೆ ನೀಡಲಾದ ನೋಟಿಸುಗಳನ್ನು ಪ್ರಶ್ನಿಸಲಾರಂಭಿಸಿದರು. ಕಾರ್ಯಕರ್ತರೂ ಇಲ್ಲಿಯೇ ಕುಳಿತು ಕೊಳ್ಳಲಿ. ಎಲ್ಲ ಬಣ್ಣಗಳೂ ಬಯಲಾಗಲಿ ಎಂದು ಪಟ್ಟು ಹಿಡಿದರು. ಇವರೊಂದಿಗೆ ಸೇರಿಕೊಂಡ ದೀಪಕ ಹೊನ್ನಾವರ ಪಕ್ಷದ ನಾಯಕರ ಕಾರ್ಯವೈಖರಿಯನ್ನು ಟೀಕಿಸಲಾರಂಭಿಸಿದರು. ಅಷ್ಟರಲ್ಲಿ ಎರಡು ಬಣಗಳು ರೂಪ ಪಡೆದುಕೊಂಡು ಜೈಕಾರ, ಧಿಕ್ಕಾರ ಘೋಷಣೆಯಲ್ಲಿ ತೊಡಗಿಕೊಂಡವು. ಎಲ್.ವಿ.ಶ್ಯಾನಭಾಗ ಮತ್ತು ದೀಪಕ ಹೊನ್ನಾವರ ನಡುವೆ ಒಂದು ಹಂತದಲ್ಲಿ ಮಾತಿನ ಚಕಮಕಿ ನಡೆದು ಗದ್ದಲದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಾಯಿತು. ಜಿಲ್ಲಾ ಪಂಚಾಯತ ಸದಸ್ಯ ಶಂಭುಗೌಡ ಮತ್ತಿತರರು ಉದ್ರಿಕ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಜಿಲ್ಲಾಧ್ಯಕ್ಷ ಶಾಂತರಾಮ ಹೆಗಡೆ ಅನಿವಾರ್ಯವಾಗಿ ಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡುವ ನಿರ್ಣಯವನ್ನು ಕೈಗೊಂಡರು.







ಹಿಂದೂ ಪರ ಸಂಘಟನೆ ಪ್ರತ್ಯಕ್ಷ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಗೌಜಿ ಗದ್ದಲದ ಸ್ಥಳದಲ್ಲಿ ಭಟ್ಕಳದ ಹಿಂದೂ ಪರ ಸಂಘಟನೆಯ ಕೆಲ ಕಾರ್ಯಕರ್ತರು ಕಾಣಿಸಿಕೊಂಡಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಇವರನ್ನು ಯಾರು ಕರೆಯಿಸಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಅಲ್ಲಲ್ಲಿ ಚರ್ಚೆ ನಡೆಯುತ್ತಿರುವುದು ಕಾಂಗ್ರೆಸ್ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿ ಪರಿಣಮಿಸಿತು.
ಜಿಪಂ ಸದಸ್ಯರ ಸಭೆಯಲ್ಲಿ ನಡೆದದ್ದೇನು?: ಬುಧವಾರ ಮುಂಜಾನೆ 11ಗಂಟೆಗೆ ಕರೆಯಲಾದ ಜಿಲ್ಲಾ ಪಂಚಾಯತ ಸದಸ್ಯರ ಸಭೆ ಸದಸ್ಯರ ಅಳುಕಿನ ಆಗಮನದೊಂದಿಗೆ 1 ಗಂಟೆಗೆ ಪ್ರಾರಂಭವಾಯಿತು. ಒಟ್ಟೂ 24 ಸದಸ್ಯರಲ್ಲಿ 11 ಜನರು ಸಭೆಗೆ ಗೈರು ಹಾಜರಾದರು. ಜಿಲ್ಲಾ ಪಂಚಾಯತ ಅಧ್ಯಕ್ಷ ಎಲ್.ವಿ.ಶ್ಯಾನಭಾಗ, ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಎಲ್.ಟಿ.ಪಾಟೀಲ, ಭೀಮಣ್ಣ ನಾಯ್ಕ, ಶಂಭು ಗೌಡ, ರಾಜಾ ವಕೀಲ, ನಾಗೇಶ ಅಚ್ಚಲಗುಂಡಿ, ಹೊನ್ನಪ್ಪ ನಾಯ್ಕ, ವರದಾ ಹೆಗಡೆ, ಶಾಂತಿ ಆಗೇರ, ಇಂದಿರಾ ನಾಯ್ಕ, ಉಷಾ ನಾಯ್ಕ, ಸುಬ್ರಹ್ಮಣ್ಯ ಶಾಸ್ತ್ರಿ ಸಭೆಗೆ ಹಾಜರಾದವರಲ್ಲಿ ಪ್ರಮುಖರಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ ಹೆಗಡೆ ಹಾಗೂ ಶಾಸಕ ಜೆ.ಡಿ.ನಾಯ್ಕರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢಿಕರಿಸಲಾಗಿದ್ದು, ಸಭೆ 30 ನಿಮಿಷಗಳ ಅವಧಿಯಲ್ಲಿಯೇ ಮುಗಿದು ಹೋಯಿತು. ಸಭೆಯಲ್ಲಿ ಹಾಜರಾದ ಸದಸ್ಯರು ಹೈಕಮಾಂಡ್ ನಿರ್ಣಯಕ್ಕೆ ಬದ್ಧರೆಂದು ಹೇಳಿರುವುದಾಗಿ ಮೂಲಗಳು ಮಾಹಿತಿಯನ್ನು ಒದಗಿಸಿವೆ.