ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ‘ಚರ್ಚ್‌ನ ಗೇಟನ್ನು ಪೊಲೀಸರೇ ಗುಂಡು ಹಾರಿಸಿ ಮುರಿದರು’: ನ್ಯಾ.ಸೋಮಶೇಖರ ಆಯೋಗದೆದುರು ಸಾಕ್ಷಿಯ ಪುನರುಚ್ಚಾರ

‘ಚರ್ಚ್‌ನ ಗೇಟನ್ನು ಪೊಲೀಸರೇ ಗುಂಡು ಹಾರಿಸಿ ಮುರಿದರು’: ನ್ಯಾ.ಸೋಮಶೇಖರ ಆಯೋಗದೆದುರು ಸಾಕ್ಷಿಯ ಪುನರುಚ್ಚಾರ

Thu, 04 Feb 2010 03:20:00  Office Staff   S.O. News Service
ಮಂಗಳೂರು, ಫೆ.೩: ಕುಲಶೇಖರ ಚರ್ಚ್‌ನಲ್ಲಿ ೨೦೦೮ ಸೆಪ್ಟಂಬರ್ ೧೫ರಂದು ತಾನು ಪ್ರಾರ್ಥನೆಗೆಂದು ತೆರಳಿದ್ದ ಸಂದರ್ಭ ಚರ್ಚ್‌ನ ಗೇಟಿನ ಬೀಗವನ್ನು ಪೊಲೀಸರು ಗುಂಡು ಹಾರಿಸಿ ಮುರಿದು ಒಳಬರುವುದನ್ನು ಕಂಡೆ ಎಂದು ನ್ಯಾ. ಸೋಮಶೇಖರ ಆಯೋಗದೆದುರು ಇಂದು ಪ್ರಮುಖ ಸಾಕ್ಷಿಯೊಬ್ಬರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. 

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ನ್ಯಾ. ಸೋಮಶೇಖರ ಆಯೋಗ ನಡೆಸುತ್ತಿರುವ ವಿಚಾರಣೆಯ ಸಂದರ್ಭ ಇಂದು ಪೊಲೀಸ್ ಪರ ವಕೀಲ ನಾರಾಯಣ ರೆಡ್ಡಿ  ಕುಲಶೇಖರ ಚರ್ಚ್ ದಾಳಿಯ ಸಂದರ್ಭದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಜಾಯ್ಸ್ ಲೀನಾ ಪಾಯಸ್ ಎಂಬವರನ್ನು ಪಾಟೀಸವಾಲಿಗೆ ಒಳಪಡಿಸಿದಾಗ ತಾವು ಪ್ರಮಾಣ ಪತ್ರದಲ್ಲಿ ನೀಡಿರುವ ಹೇಳಿಕೆಯನ್ನು ಮತ್ತೆ ಆಯೋಗದೆದುರು ಸ್ಪಷ್ಟಪಡಿಸಿದರು. 

ಘಟನೆಯ ಸಂದರ್ಭ ಭಯಭೀತರಾಗಿ ಚರ್ಚ್ ಸಮೀಪದ ಶಾಲಾ ಕೊಠಡಿಯೊಳಗೆ ತಾವೆಲ್ಲ ಸೇರಿಕೊಂಡಿದ್ದೆವು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಇನ್ಸ್‌ಪೆಕ್ಟರ್ ಗಣಪತಿ ಒಳಗಿನಿಂದ ೨೫ ಮಂದಿ ಯುವಕರನ್ನು ಹೊರಗೆ ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿಕೊಂಡರಲ್ಲದೆ, ಒಂದು ಗಂಟೆಯೊಳಗೆ ಅವರನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಕೊಠಡಿಯೊಳಗಿನಿಂದ ೨೫ ಮಂದಿಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು ಎಂದು ವಕೀಲ ನಾರಾಯಣ ರೆಡ್ಡಿಯ ಪಾಟೀ ಸವಾಲಿಗೆ ಪಾಯಸ್ ಹೇಳಿದರು.

ಕೇಸರಿ ಶಾಲು ಹೊದ್ದವರಲ್ಲೂ ಲಾಠಿ!

ಕುಲಶೇಖರ ಚರ್ಚ್‌ನಲ್ಲಿ ನಡೆದ ಘಟನೆಯ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದಾಗ ಅವರೊಂದಿಗೆ ಕೆಂಪು ಶಾಲು ಧರಿಸಿದ್ದ ಕೆಲವರ ಕೈಯಲ್ಲೂ ಲಾಠಿ ಇದ್ದು, ಪೊಲೀಸರ ಜೊತೆ ಅವರೂ ಲಾಠಿ ಬೀಸಿದ್ದರು. ಇದರಿಂದಾಗಿಯೇ ಪೊಲೀಸರ ಜೊತೆ ಬಜರಂಗದಳದವರೂ ಶಾಮೀಲಾಗಿದ್ದರು ಎಂಬುದು ತನ್ನ ಅನುಮಾನ ಎಂದು ಬಜರಂಗದಳ ಪರ ವಕೀಲ ಮಧುಸೂದನ್ ಅಡಿಗರ ಪಾಟೀ ಸವಾಲಿಗೆ ಪಾಯಸ್ ಪ್ರತಿಕ್ರಿಯಿಸಿದರು. 

ಈ ಸಂದರ್ಭ ವಕೀಲ ಮಧುಸೂದನ್ ಕುಲಶೇಖರದಲ್ಲಿ ನಡೆದ ಘಟನೆಯ ಡಿಯೊ ಚಿತ್ರೀಕರಣವನ್ನು ಪ್ರದರ್ಶಿಸುವಂತೆ ಆಯೋಗಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ನ್ಯಾ.ಸೋಮಶೇಖರ ಸಿಡಿ ಪ್ರದರ್ಶನಕ್ಕೆ ಅವಕಾಶ ನೀಡಿದರು. 

ಸಿಡಿ ಕ್ಷಿಸಿದ ಬಳಿಕ ಪ್ರತಿಕ್ರಿಯಿಸಿದ ಪಾಯಸ್, ಇಂದು ತನಗೆ ತೋರಿಸಲಾದ ಸಿಡಿ ಚಿತ್ರೀಕರಣದಲ್ಲಿ ಪೊಲೀಸರ ಜೊತೆಗೆ ಕೇಸರಿ ಶಾಲು ಹೊದ್ದವರು ಕಾಣುತ್ತಿಲ್ಲವಾದರೂ, ಘಟನೆಯ ಸಂದರ್ಭ ಪೊಲೀಸರ ಜೊತೆಗಿದ್ದ ಕೇಸರಿ ಶಾಲಿನವರನ್ನು ತಾನು ಕಣ್ಣಾರೆ ಕಂಡಿದ್ದೇನೆ. ತನ್ನ ಕಣ್ಣುಗಳನ್ನು ಬಿಟ್ಟರೆ ಬೇರೆ ಯಾವುದೇ ಪುರಾವೆ ಇಲ್ಲ ಎಂದು ಆಯೋಗಕ್ಕೆ ತಿಳಿಸಿದರು. 

ಬಜರಂಗದಳದವರು ಚರ್ಚ್ ದಾಳಿಯನ್ನು ನಡೆಸಿಯೇ ಇಲ್ಲ. ಮತಾಂತರ, ಹಿಂದೂ ಧರ್ಮದ ಅವಹೇಳನದಿಂದಾಗಿ ಚರ್ಚ್ ದಾಳಿ ನಡೆದಿದೆ ಎಂದು ವಕೀಲ ಮಧುಸೂದನ್ ವಾದಿಸಿದಾಗ ಸಾಕ್ಷಿ ಅದೆಲ್ಲಾ ಸುಳ್ಳೆಂದು ಪ್ರತ್ಯುತ್ತರಿಸಿದರು. 

ಜಾತಿ ನೋಡಿ ವ್ಯಾಪಾರ ಮಾಡುವುದಿಲ್ಲ

೨೦೦೮ರ ಸೆಪ್ಟಂಬರ್ ೧೪ರಂದು ಮಿಲಾಗ್ರಿಸ್ ಚರ್ಚ್ ದಾಳಿ ಘಟನೆಯ ಸಂದರ್ಭ ತಮ್ಮ ಹೊಟೇಲಿಗೆ ಕ್ರೈಸ್ತ ಸಮುದಾಯದವರು ನುಗ್ಗಿ ಹಾನಿ ಮಾಡಿದ ಕಾರಣ, ಈ ಬಗ್ಗೆ ಮಹಜರು ನಡೆಸಲಾಗಿ ತನಗೆ ಸರಕಾರ ೬೦೦೦ ರೂ.ಗಳ ಪರಿಹಾರ ನೀಡಿತ್ತು. ಆದರೆ ಪೊಲೀಸರು ಮಹಜರು ನಡೆಸಿದ ಪ್ರಕಾರ ೨೫,೦೦೦ ರೂ. ನಷ್ಟವಾಗಿದೆ ಎಂಬುದಾಗಿ  ಹಂಪನಕಟ್ಟೆಯ ಸಾಗರ್ ಹೊಟೇಲಿನ ಮಾಲಕ ರತ್ನಾಕರ್ ಇಂದು ಸಾಕ್ಷ ನುಡಿದರು. 

ಈ ಸಂದರ್ಭ ಸಾಕ್ಷಿಯನ್ನು ಪಾಟೀಸವಾಲಿಗೆ ಗುರಿಪಡಿಸಿದ ಕ್ರೈಸ್ತ ಸಂತ್ರಸ್ತರ ಪರ ವಕೀಲ ಎಂ.ಪಿ. ನೊರೊನ್ಹಾ, ಹೊಟೇಲಿಗೆ ಹಾನಿ ಮಾಡಿದ್ದವರು ಕ್ರೈಸ್ತರೆಂಬುದನ್ನು ಹೇಗೆ ಗುರುತಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಆ ದಿನ ಹೊಟೇಲಿಗೆ ಬಂದಿದ್ದವರಲ್ಲೊಬ್ಬ ಕುತ್ತಿಗೆಯಲ್ಲಿ ಶಿಲುಬೆಯ ಸರ ಧರಿಸಿದ್ದ ಎಂದು ಹೇಳಿದರು. ಆದರೆ, ಘಟನೆಯ ಸಂದರ್ಭ ತಾನು ಹೊಟೇಲಿನಲ್ಲಿ ಇರಲಿಲ್ಲವಾದ್ದರಿಂದ ಹೊಟೇಲಿನ ಹಾನಿ ಘಟನೆಯನ್ನು ತಾನು ಪ್ರತ್ಯಕ್ಷವಾಗಿ ಕಂಡಿಲ್ಲ ಎಂದು ರತ್ನಾಕರ್ ಹೇಳಿದರು. 

 ಮತ್ತೂ ಮುಂದುವರಿದು ವಕೀಲ ನೊರೊನ್ಹಾರ ಪಾಟೀ ಸವಾಲೊಂದಕ್ಕೆ, ತಮ್ಮ ಹೊಟೇಲಿಗೆ ಯಾವ ಜಾತಿಯವರೆಲ್ಲಾ ಬರುತ್ತಾರೆಂಬುದು ತಿಳಿದಿಲ್ಲ. ಜಾತಿ ನೋಡಿ ತಾನು ವ್ಯಾಪಾರ ಮಾಡುವುದಿಲ್ಲ ಎಂದು ರತ್ನಾಕರ್ ಉತ್ತರಿಸಿದರು. 

ವಕೀಲರಾದ ಇಬ್ರಾಹೀಂ, ಜಗದೀಶ್ ಶೇಣವ, ಎಲ್.ಎನ್. ಹೆಗ್ಡೆ, ಪ್ರಸನ್ನ ದೇಶಪಾಂಡೆ, ಸುಮನಾ ಶರಣ್, ಫ್ರಾನ್ಸಿಸ್, ಆಯೋಗದ ತಿಮ್ಮಾವಗೋಳ್ ಮೊದಲಾದವರು ಉಪಸ್ಥಿತರಿದ್ದರು

Share: