ಕಾಸರಗೋಡು, ನ.17: ರವಿವಾರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ಲೀಗ್ ಕಾರ್ಯಕರ್ತರು ಬಲಿಯಾದುದ್ದನ್ನು ಪ್ರತಿಭಟಿಸಿ ಐಕ್ಯರಂಗ ಇಂದು ಕರೆ ನೀಡಿದ ಹರತಾಳ ಪೂರ್ಣವಾಗಿದ್ದು, ಕೆಲ ಅಹಿತಕರ ಘಟನೆ ಹೊರತುಪಡಿಸಿದರೆ ಒಟ್ಟಾರೆ ಸ್ಥಿತಿ ಶಾಂತಿಯುತವಾಗಿತ್ತು.
ನಗರದ ಹೊರ ವಲಯದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಮಾರುತಿ ಓಮ್ನಿ ವ್ಯಾನಿಗೆ ಬೈಕಿನಲ್ಲಿ ಬಂದ ಯುವಕರ ತಂಡ ಬೆಂಕಿ ಹಚ್ಚಿ ಪರಾರಿಯಾಗಿದೆ. ಬೇಕಲದಲ್ಲಿ ಪೊಲೀಸ್ ಜೀಪಿಗೆ ಕಲ್ಲು ತೂರಾಟ ನಡೆಸಿದ್ದು, ಎಎಸ್ಐ ಭಾಸ್ಕರ ಗಾಯಗೊಂಡಿದ್ದಾರೆ.
ಪುದುಮದಲ್ಲಿ ನಿನ್ನೆ ರಾತ್ರಿ ಮುಸ್ಲಿಂ ಲೀಗ್ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಸಿಪಿಎಂ ಪ್ರಾದೇಶಿಕ ಕಚೇರಿಗೆ ಕಲ್ಲು ತೂರಾಟ ನಡೆಸಲಾಗಿದೆ.
ಮಧ್ಯಾಹ್ನ ತನಕ ಸ್ಥಿತಿ ಶಾಂತವಾಗಿದ್ದರೂ, ಬಳಿಕ ಅಲ್ಲಲ್ಲಿ ಸಣ್ಣ ಪುಟ್ಟ ಹಿಂಸಾಚಾರ ನಡೆದಿದೆ. ರವಿವಾರದ ಘಟನೆಗೆ ಸಂಬಂಧ ಪಟ್ಟಂತೆ ಹದಿನೈದಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹರತಾಳದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕಾಸರಗೋಡಿನಿಂದ ಮಂಗಳೂರು, ಸುಳ್ಯ, ವಿಟ್ಲ ನಡುವಿನ ಅಂತಾರಾಜ್ಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಎಡಿಜಿಪಿ ಮಹೇಶ್ ಕುಮಾರ್ ಶಿಂಗ್ಲಾ, ನೇತೃತ್ವದಲ್ಲಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ. ಕಣ್ಣೂರು, ಮಲಪ್ಪುರಂನಿಂದ ಹೆಚ್ಚುವರಿ ಪೊಲೀಸ್ ಪಡೆ ಕಾಸರಗೋಡಿಗೆ ಆಗಮಿಸಿದೆ.
ಜಿಲ್ಲೆಯಾದ್ಯಂತ ಎರಡು ದಿನ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಸರಕಾರಿ ಕಚೇರಿ, ಶಾಲೆಗಳಲ್ಲಿ ಹಾಜರಾತಿ ವಿರಳವಾಗಿತ್ತು. ಬಹುತೇಕ ಶಾಲೆಗಳು ಬಂದಾಗಿದ್ದವು.
ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಮಂಗಳವಾರ ಕಾಸರಗೋಡಿಗೆ ಭೇಟಿ ನೀಡಲಿದ್ದು, ಗಲಭೆ ಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸುವರು.
ಜಿಲ್ಲಾಧಿಕಾರಿ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ನಾಳೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ವ ಪಕ್ಷ ಸಭೆ ಕರೆಯಲಾಗಿದೆ.
ಗೋಲಿಬಾರಿಗೆ ಕಾರಣವಾದ ಬಗ್ಗೆ ತನಿಖೆ ನಡೆಸಲಾಗುವುದೆಂದು ಉತ್ತರ ವಲಯ ಐಜಿ ಥೋಮಿನ್ ತಚ್ಚಂಗೇರಿ ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಾಮದಾಸ್ ಪೋತನ್ರವರೇ ಗೋಲಿಬಾರ್ ನಡೆಸಿದ ಬಗ್ಗೆ ಮಾಹಿತಿ ಲಭಿಸಿದ್ದು, ಗೋಲಿಬಾರ್ ಅನಿವಾರ್ಯ ವಾಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವು ದೆಂದು ತಿಳಿಸಿದ ತಚ್ಚಂಗೇರಿಯವರು, ಪೂರ್ವ ಯೋಜಿತವಾಗಿಯೇ ಹಿಂಸಾಚಾರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಜೇಕಬ್ ಪುನ್ನೂಸ್ ಇಂದು ಸಂಜೆ ಹಿಂಸಾಚಾರ ನಡೆದ ಸ್ಥಳಗಳಿಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಗಲಭೆ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕಾಸರಗೋಡಿಗೆ ಕರೆಸಲಾಗುವುದೆಂದು ಹೇಳಿದರು.
ಹತ್ಯೆಗೀಡಾದ ಮುಹಮ್ಮದ್ ಶಫಿಕ್ರ ಮೃತದೇಹ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಗೂ ಮುಹಮ್ಮದ್ ಅಝರ್ರ ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಪ್ರತಿಪಕ್ಷ ಐಕ್ಯರಂಗ ಸರಕಾರವನ್ನು ಒತ್ತಾಯಿಸಿದೆ. ಮೃತರ ಕುಟುಂಬದವರಿಗೆ ತಲಾ ೧೦ಲಕ್ಷ ರೂ. ಪರಿಹಾರ ನೀಡುವುದಾಗಿ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಪ್ರಕಟಿಸಿದೆ