ಮಂಗಳೂರು, ಡಿ.18: ವಿಶೇಷ ಆರ್ಥಿಕ ವಲಯಗಳು ಬಂಡವಾಳ ಶಾಹಿ ಶಕ್ತಿಗಳ ಕೂಸು ಎಂದು ಕೇರಳ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷ ಪಿ. ಮುಜೀಬುರ್ರಹ್ಮಾನ್ ತಿಳಿಸಿದರು.
ಅವರು ಇಂದು ದಕ್ಷಿಣ ಕನ್ನಡ ಜಮಾತ್ ಇ ಇಸ್ಲಾಮ್ ಹಿಂದ್ ಯೂತ್ ವಿಂಗ್ ವತಿಯಿಂದ ಬಂಡವಾಳ ಶಾಹಿ-ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡ ಜನಜಾಗೃತಿ ಸಭೆ ಹಾಗು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಸಾಮ್ರಾಜ್ಯಶಾಹಿ ಶಕ್ತಿ ದೇಶಗಳು ಈ ದೇಶದ ವಿವಿಧ ಸ್ತರಗಳನ್ನು ಆಕ್ರಮಿಸಿಕೊಂಡು ಇಲ್ಲಿನ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದು ಮುಜೀಬುರ್ರಹ್ಮಾನ್ ತಿಳಿಸಿದರು.
ದೇಶವನ್ನು ಶ್ರೀಮಂತರಿಂದ ರಕ್ಷಿಸಬೆಕಾಗಿದೆ : ಈ ದೇಶವನ್ನು ವಿವಿಧ ವ್ಯವಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟು ಮೆರೆಯುತ್ತಿರುವ ಶ್ರಿಮಂತರಿಂದ ರಕ್ಷಿಸಬೇಕಾಗಿದೆ ಎಂದು ರಂಗಕರ್ಮಿ ಶಶಿಕಾಂತ ಯಡಹಳ್ಳಿ ತಿಳಿಸಿದರು.
ಈ ದೇಶವನ್ನು ಸಾಮ್ರಾಜ್ಯ ಶಾಹಿ ಶಕ್ತಿಗಳು ಒಡೆದು ಆಳುತ್ತಿವೆ. ಆ ಶಕ್ತಿಗಳು ಈ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಸಂದರ್ಭದಲ್ಲೂ ದಲಿತರನ್ನು, ಅಲ್ಪಸಂಖ್ಯಾತರನ್ನು, ರೈತರನ್ನು ಒಡೆದು ದುರ್ಬಲಗೊಳಿಸಿ ಇಂದು ಮೆರೆದಾಡುತ್ತಿವೆ. ಪ್ರಪಂಚದಾದ್ಯಂತ ತಮ್ಮ ಕಪಿಮುಷ್ಠಿಯನ್ನು ಚಾಚುತ್ತಿವೆ. ಜಾಗತೀಕರಣ ಎನ್ನುವುದು ಈ ದೇಶವನ್ನು ಲೂಟಿ ಮಾಡಲು ಹೂಡಿದ ಅಂತರ್ರಾಷ್ಟ್ರೀಯ ಕುತಂತ್ರ ಎಂದು ಶಶಿಕಾಂತ ಯಡಹಳ್ಳಿ ವಿವರಿಸಿದರು.
ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಹಿರಾತುಗಳ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ಇಂದು ನಮ್ಮ ಮನೆಗಳಿಗೆ ಮಕ್ಕಳ ಮೆದುಳಿನ ಒಳಗೆ ಪ್ರವೇಶಿಸುತ್ತಿವೆ. ಇಂತಹ ಸಾಮ್ರಾಜ್ಯ ಶಾಹಿ ಶಕ್ತಿಗಳ ಓಟವನ್ನು ತಡೆಯಲು ಜನ ಜಾಗೃತಿ ಅಗತ್ಯ. ಅವರ ವಸ್ತುಗಳನ್ನು ಬಹಿಷ್ಕರಿ ಸಬೇಕಾಗಿದೆ ಎಂದು ಶಶಿಕಾಂತ್ ತಿಳಿಸಿದರು.
ಬಂಡವಾಳ ಶಾಹಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ದೇಶಿ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ನಟೇಶ್ ಉಳ್ಳಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶವನ್ನು ಬಡತನ, ಗುಲಾಬಿಗಿರಿಯಿಂದ ರಕ್ಷಿಸಬೇಕಾದರೆ ಈ ದೇಶದ ಜನಸಾಮಾನ್ಯರಲ್ಲೂ ಜಾಗೃತಿ ಅಗತ್ಯ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ರೈತರನ್ನು ಬೀದಿಪಾಲು ಮಾಡುವ ವ್ಯವಸ್ಥೆ ಕೊನೆಗಾಣಬೇಕು. ಉಳ್ಳವರ ಪರವಾದ ಆಡಳಿತ ವ್ಯವಸ್ಥೆಯನ್ನು ಬದಲಾವಣೆಗೆ ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಯಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಮಾತ್ ಹಿಂದ್ ಯೂತ್ ವಿಂಗ್ ಅಧ್ಯಕ್ಷ ಮುಹಮ್ಮದ್ ಕುಂಞ ಕರೆ ನೀಡಿದರು.
ವೇದಿಕೆಯಲ್ಲಿ ಕೆ.ಎಂ. ಶರೀ-, ಗಿರಿಯ ಗೌಡ, ಅಬ್ದುಸ್ಸಲಾಂ ಯು, ಕೆ.ಎಂ. ಅಶ್ರ-, ಗ್ರೆಗರಿಯೋ ಪತ್ರಾವೋ, ಶಮೀರಾ ಜಹಾನ್, ನಿಸಾರ್ ಅಹ್ಮದ್, ರುಕ್ಸನಾ ಉಳ್ಳಾಲ ಉಪಸ್ಥಿತರಿದ್ದರು. ಮುಹಮ್ಮದ್ ಮುಬೀನ್ ಉಳ್ಳಾಲ ಸ್ವಾಗತಿಸಿ, ವಂದಿಸಿದರು.
ಜನಜಾಗೃತಿ ಸಭೆಗೂ ಮುನ್ನ ಜ್ಯೋತಿ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ‍್ಯಾಲಿ ನಡೆಯಿತು.
ಸರಕಾರಕ್ಕೆ ಮನವಿ
*ಭಾರತ ಸರಕಾರವು ಸಮಾನತೆ ಮತ್ತು ನ್ಯಾಯ ಪೂರ್ಣವಾದ ವಿದೇಶಿ ನೀತಿಯನ್ನು ಅಳವಡಿಸಬೇಕು ಮತ್ತು ನ್ಯಾಯಯುತವಾದ ಜಾಗತಿಕ ವ್ಯವಸ್ಥೆಯನ್ನು ಸ್ಥಾಪಿಸಲು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಬೇಕು.
*ಬಂಡವಾಳ ಶಾಹಿ ವ್ಯವಸ್ಥೆಗಳ ಅವಲಂಬಿಕೆಯನ್ನು ಯೋಜನಾಬದ್ಧವಾಗಿ ಹಂತ ಹಂತವಾಗಿ ನಿಲ್ಲಿಸಬೇಕು.
*ಕೈಗಾರಿಕೋತ್ಪನ್ನಗಳನ್ನು ಮತ್ತು ಗುಡಿ ಕೈಗಾರಿಕೆಯನ್ನು ಆಕ್ರಮಣದಿಂದ ರಕ್ಷಿಸಬೇಕು.
*ವಿದೇಶಿ ನೇರ ಹೂಡಿಕೆಗಳನ್ನು ನಿಷೇದಿಸಲಾಗಿದ್ದರೂ ಅದನ್ನು ನಿರುತ್ತೇಜಿಸಬೇಕು.
*ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ವ್ಯವಹಾರಗಳಲ್ಲಿಯೂ ಬಡ್ಡಿರಹಿತ ಹಾಗು ಪಾಲುದಾರಿಕೆಯಾಧಾರಿತ ಆರ್ಥಿಕ ವ್ಯವಸ್ಥೆಯ ಅವಕಾಶಗಳನ್ನು ಹಂತ ಹಂತವಾಗಿ ವಿಸ್ತರಿಸಬೇಕು.
*ವಿಶೇಷ ಆರ್ಥಿಕ ವಲಯಗಳಿಗೆ ದೇಶದ ಸ್ವಾತಂತ್ರ್ಯ ಹರಣ ಮಾಡಲು ಅನುಮತಿ ನೀಡಬಾರದು.
*ಬಹುರಾಷ್ಟ್ರೀಯ ಕಂಪೆನಿಗಳನ್ನೊಳಗೊಂಡಂತೆ ಸಾರ್ವಜನಿಕ ಉದ್ದಿಮೆಗಳು ಕಾರ್ಮಿಕ ಕಾನೂನುಗಳಿಗೆ ಬದ್ಧರಾಗಿಬೇಕು.
*ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಹಣವನ್ನು ವ್ಯಯಿಸಬೇಕು. ಶಿಕ್ಷಣ ಮತ್ತು ಆರೋಗ್ಯದಂತಹ ಸಾಮಾಜಿಕ ರಂಗಗಳ ವಾಣಿಜ್ಯೀಕರಣವನ್ನು ತಡೆಯಬೇಕು.
-ಪುಷ್ಪರಾಜ್