ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

Fri, 22 Mar 2024 20:51:54  Office Staff   Vb

ಹೊಸದಿಲ್ಲಿ: ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ “ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ಲಿಮಿಟೆಡ್' ಭಾರತೀಯ ಜನತಾ ಪಕ್ಷ  (ಬಿಜೆಪಿ)ಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ಕನಿಷ್ಠ 375 ಕೋಟಿ ರೂ. ದೇಣಿಗೆ ನೀಡಿದೆ ಎಂದು ಚುನಾವಣಾ ಆಯೋಗ ಗುರುವಾರ ಬಿಡುಗಡೆಗೊಳಿಸಿರುವ ಹೊಸ ಅಂಕಿಅಂಶಗಳು ತಿಳಿಸಿವೆ. ಇದೇ ಕಂಪೆನಿಯು ಖರೀದಿಸಿರುವ ಇನ್ನೊಂದು 35 ಕೋಟಿ ರೂ. ಬಾಂಡ್‌ಗಳನ್ನು ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ಗಳು ಹಂಚಿಕೊಂಡಿವೆ.

2022 ಜನವರಿ 5ರಂದು, ಕ್ವಿಕ್ ಸಪ್ಪೆ 225 ಕೋಟಿ ರೂ. ಮೊತ್ತದ ಬಾಂಡ್‌ಗಳನ್ನು ಖರೀದಿಸಿದೆ. ಈ ಪೈಕಿ 200 ಕೋಟಿ ರೂ.ಯನ್ನು ಬಿಜೆಪಿಯು ಅದೇ ವರ್ಷದ ಜನವರಿ 10ರಂದು ನಗದೀಕರಿಸಿದೆ. ಉಳಿದ 25 ಕೋಟಿ ರೂ. ಮೊತ್ತವನ್ನು ಶಿವಸೇನೆಯು ಜನವರಿ 6ರಂದು ನಗದೀಕರಿಸಿದೆ.

2022 ಜನವರಿ 10ರಂದು, ಕ್ವಿಕ್ ಸಪ್ಪೆ 10 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತು. ಈ ಬಾಂಡ್‌ಗಳನ್ನು ಜನವರಿ 11ರಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ನಗದೀಕರಿಸಿತು.

ಹನ್ನೊಂದು ತಿಂಗಳ ಬಳಿಕ, 2022ನವೆಂಬರ್ ಒಂದರಂದು, ಕ್ವಿಕ್ ಸಪ್ಪೆ ಕಂಪೆನಿಯು ಒಂದು ಕೋಟಿ ರೂ. ಮುಖಬೆಲೆಯ 125 ಬಾಂಡ್ (ಒಟ್ಟು 125 ಕೋಟಿ ರೂ. ಮೌಲ್ಯಗಳನ್ನು ಖರೀದಿಸಿತು. ಬಿಜೆಪಿಯು ಅವೆಲ್ಲವನ್ನೂ 2022 ನವೆಂಬರ್ 14ರಂದು ನಗದೀಕರಿಸಿತು.

ಒಂದು ವರ್ಷದ ಬಳಿಕ, 2023 ನವೆಂಬರ್ 17ರಂದು ಅದೇ ಕಂಪೆನಿಯು ಇನ್ನೊಂದು 50 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಕೊಂಡುಕೊಂಡಿತು. ಅದೆಲ್ಲವನ್ನೂ ಬಿಜೆಪಿಯು 2023 ನವೆಂಬರ್ 20ರಂದು ನಗದೀಕರಿಸಿತು.

ಕ್ವಿಕ್ ಸಪ್ಪೆ ಕಂಪೆನಿಯ 50 ಶೇಕಡಕ್ಕೂ ಅಧಿಕ ಶೇರುಗಳನ್ನು ರಿಲಯನ್ಸ್ ಗುಂಪಿಗೆ ಸೇರಿರುವ ಮೂರು ಕಂಪೆನಿಗಳು ಹೊಂದಿವೆ ಎಂದು 'ರಾಯ್ಸರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಕಂಪೆನಿಯ ಮೂವರು ನಿರ್ದೇಶಕರಲ್ಲಿ ಒಬ್ಬರಾಗಿರುವ ತಪಸ್ ಮಿತ್ರಾ ರಿಲಯನ್ಸ್ ಆಯಿಲ್‌ ಆ್ಯಂಡ್ ಪೆಟ್ರೋಲಿಯಮ್, ರಿಲಯನ್ಸ್ ಎರೋಸ್ ಪ್ರೊಡಕ್ಷನ್ಸ್, ರಿಲಯನ್ಸ್ ಫೋಟೊ ಫಿಲ್ಸ್, ರಿಲಯನ್ಸ್ ಫಯ‌ರ್ ಬ್ರಿಗೇಡ್ಸ್ ಮತ್ತು ರಿಲಯನ್ಸ್ ಪಾಲಿಸ್ಟರ್ ಕಂಪೆನಿಗಳಲ್ಲೂ ನಿರ್ದೇಶಕರಾಗಿದ್ದಾರೆ.

ಅವರ ಲಿಂಕ್‌ಇನ್ ಸಾಮಾಜಿಕ ಮಾಧ್ಯಮ ಸ್ವವಿವರದ ಪ್ರಕಾರ, ಅವರು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿದ್ದಾರೆ.

“ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಯಾವುದೇ ರಿಲಯನ್ಸ್ ಕಂಪೆನಿಯ ಅಂಗಸಂಸ್ಥೆಯಲ್ಲ'' ಎಂದು ರಿಲಯನ್ಸ್ ಕಂಪೆನಿಯ ವಕ್ತಾರರೊಬ್ಬರು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.


Share: