ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕಳ್ಳಭಟ್ಟಿ ತಯಾರಕರಿಗೆ ಸರ್ಕಾರದಿಂದ ಯಾವುದೇ ಸವಲತ್ತು ಇಲ್ಲ - ರೇಣುಕಾಚಾರ್ಯ

ಬೆಂಗಳೂರು: ಕಳ್ಳಭಟ್ಟಿ ತಯಾರಕರಿಗೆ ಸರ್ಕಾರದಿಂದ ಯಾವುದೇ ಸವಲತ್ತು ಇಲ್ಲ - ರೇಣುಕಾಚಾರ್ಯ

Tue, 27 Apr 2010 16:14:00  Office Staff   S.O. News Service

ಬೆಂಗಳೂರು,ಏ,೨೭-ಕಳ್ಳಭಟ್ಟಿ ತಯಾರಿಸುವವರು ಹಾಗೂ ಮಾರುವವರಿಗೆ ಇನ್ನು ಮುಂದೆ ಸರ್ಕಾರದ ಯಾವುದೇ ಸವಲತ್ತುಗಳನ್ನು ನೀಡುವುದಿಲ್ಲ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಇಂದಿಲ್ಲಿ ಘೋಷಿಸಿದ್ದಾರೆ.

 

 

ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೇ, ಕಳ್ಳಭಟ್ಟಿಯನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸಾರಾಯಿ ನಿಷೇಧದ ನಂತರವೂ ರಾಜ್ಯದ ಹಲವು ಭಾಗಗಳಲ್ಲಿ ಕಳ್ಳಭಟ್ಟಿ ತಯಾರಿಕೆ ಕೆಲಸ ನಡೆಯುತ್ತಿದೆ. ಇದನ್ನು ತಡೆಗಟ್ಟಲು ವ್ಯಾಪಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

 

ಹೀಗಾಗಿಯೇ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಸ್ಥರ ಬೆಂಬಲದೊಂದಿಗೆ ಕಳ್ಳಭಟ್ಟಿಯನ್ನು ನಿರ್ಮೂಲ ಮಾಡಲು ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕಳ್ಳಭಟ್ಟಿ ತಯಾರಿಸುವವರು ಮತ್ತು ಮಾರುವವರಿಗೆ ಇನ್ನು ಮುಂದೆ ಸರ್ಕಾರದ ಯಾವುದೇ ಯೋಜನೆಯ ಸವಲತ್ತುಗಳನ್ನು ನೀಡದಿರಲು ತೀರ್ಮಾನಿಸಲಾಗಿದೆ ಎಂದೂ ಅವರು ಪ್ರಕಟಿಸಿದರು.

 

ಬಿಗಿ ಕ್ರಮಕ್ಕೆ ಆದೇಶ

 

 

ಈ ಮಧ್ಯೆ ರಾಜ್ಯದಲ್ಲಿ ಗ್ರಾಮಪಂಚಾಯ್ತಿ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಿತಿ ಮೀರಿದ ಮದ್ಯದ ಹಾವಳಿ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

 

 

 

ಅಬಕಾರಿ, ಪೋಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಮಟ್ಟದ ತನಿಖಾ ತಂಡಗಳನ್ನು ರಚಿಸಲು ಆದೇಶ ನೀಡಲಾಗಿದೆ ಎಂದೂ ವಿವರಿಸಿದರು.

 

ಎಲ್ಲಾ ಜಿಲ್ಲೆಗಳಿಗೆ ಈಗಾಗಲೇ ಭಾರತೀಯ ಮಧ್ಯ ಬಳಕೆಯ ಪ್ರಮಾಣವನ್ನು ನಿಗದಿಗೊಳಿಸಲಾಗಿದೆ.ನಿಗದಿತ ಪ್ರಮಾಣಕ್ಕಿಂತ ಯಾವುದೇ ಮಧ್ಯದಂಗಡಿಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಧ್ಯ ಮಾರಾಟವಾದರೆ ಅದರ ಹಿನ್ನೆಲೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

 

ಚುನಾವಣೆ ಹಿನ್ನೆಲೆಯಲ್ಲಿ ಮಧ್ಯದ ಹರಿವನ್ನು ತಡೆಗಟ್ಟಲು ಅಬಕಾರಿ,ಪೋಲೀಸ್ ಸಿಬ್ಬಂದಿಗಳಲ್ಲದೇ ರಾಜ್ಯದ ಗೃಹರಕ್ಷಕದಳದ ಸೇವೆಯನ್ನೂ ಪಡೆಯಲಾಗುವುದು ಎಂದು ಸಚಿವರು ಸ್ಪಷ್ಟ ಪಡಿಸಿದರು.

 

ಚುನಾವಣೆಯ ನಡೆಯುವ ಪ್ರದೇಶಗಳು ಗಡಿ ರಾಜ್ಯಗಳಿಗೆ ಸಂಬಂಧಪಟ್ಟಿದ್ದರೆ ಅಂತಹ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಲ್ಲೂ ಮಧ್ಯ ಮಾರಾಟವಾಗದಂತೆ ನೋಡಿಕೊಳ್ಳಲು ಮನವಿ ಮಾಡಿ ಎಂದು ಸೂಚಿಸಲಾಗಿದೆ. ಹೀಗೆ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯದ ಹರಿವನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.

 

ಸಿಬ್ಬಂದಿ ನೇಮಕಾತಿ

 

 

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಗಾರ್ಡ್ಸ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಮೊದಲ ಹಂತದಲ್ಲಿ ೪೩೨ ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

 

 

ಎರಡನೇ ಹಂತದಲ್ಲಿ ಇನ್ನೂ ಐನೂರು ಮಂದಿ ಗಾರ್ಡ್ಸ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಿದ್ದು ಈ ನೇಮಕಾತಿ ಪ್ರಕ್ರಿಯೆ ಸಧ್ಯದಲ್ಲೇ ಪೂರ್ಣವಾಗಲಿದೆ ಎಂದರು.

 

 

ನಗರ ಹಾಗೂ ಪಟ್ಟಣ ಪ್ರದೇಶಗಳಿಂದ ಮಧ್ಯವನ್ನು ಖರೀದಿಸಿ ಹಳ್ಳಿಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ.ಇದು ಸರ್ಕಾರದ ಗಮನಕ್ಕೆ ಬಂದಿದ್ದು ಇದನ್ನು ಕಟ್ಟು ನಿಟ್ಟಾಗಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 

 

ಎಂಎಸ್‌ಐ‌ಎಲ್ ವತಿಯಿಂದ ೪೬೩ ಮಧ್ಯದಂಗಡಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು ಈ ಪೈಕಿ ೧೦೩ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.ಆ ಪೈಕಿ ೪೯ ಅಂಗಡಿಗಳು ಪ್ರಾರಂಭವಾಗಿವೆ ಎಂದರು.

 

 

ಜನಸಂಖ್ಯೆಯ ಆಧಾರದ ಮೇಲೆ ಹೆಚ್ಚಿನ ಮದ್ಯದಂಗಡಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದ ಕಾಲದಲ್ಲಿ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಅದರ ಆಧಾರದ ಮೇಲೆ ಹೆಚ್ಚಿನ ಮದ್ಯದಂಗಡಿಗಳನ್ನು ಪ್ರಾರಂಭಿಸಲು ಅನುಮತಿ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 


Share: