ಬೆಂಗಳೂರು, ಜ. ೧೨: ರಾಜ್ಯ ಸರಕಾರದ ವಿರುದ್ಧ ರೈತರ ಪ್ರತಿರೋಧ ದಿನ-ದಿನಕ್ಕೂ ತೀವ್ರಗೊಳ್ಳುತ್ತಿದ್ದು, ದಾವಣಗೆರೆ ದೊಡ್ಡಬಾತಿ ನೂತನ ಬಡಾವಣೆಯ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವ ಸಂಬಂಧ ಎಂದು ಅಧಿಕೃತ ಆದೇಶ ಪತ್ರ ಹೊರಡಿಸಲು ಆಗ್ರಹಿಸಿ ಮತ್ತೆ ಬೀದಿಗಿಳಿದಿದ್ದಾರೆ.
ತಕ್ಷಣವೇ ಆದೇಶ ಹೊರಡಿಸದಿದ್ದರೆ ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಮುಖಂಡರು ರಾಜ್ಯ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದೊಡ್ಡಬಾತಿ ನೂತನ ಬಡಾವಣೆ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂಬ ಅಧಿಕೃತ ಆದೇಶ ಹೊರಡಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ. ರೈತರಿಗೆ ಭರವಸೆ ನೀಡಿದಂತೆ ಸರಕಾರ ನಡೆದುಕೊಳ್ಳಬೇಕು ಎಂದು ರೈತರು ತಾಕೀತು ಮಾಡಿದರು.
ಇಲ್ಲದೆ ಇದ್ದರೆ, ರಾಜ್ಯ ಸರಕಾರದ ಭೂ ಸ್ವಾಧೀನ ನೀತಿಯ ವಿರುದ್ಧ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂಬ ಅಧಿಕೃತ ಆದೇಶ ಹೊರಬೀಳುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ದಾವಣಗೆರೆ ಜಿಲ್ಲಾ ಗೌರವಾಧ್ಯಕ್ಷ ಆವರಗೆರೆ ರುದ್ರಮುನಿ ಎಚ್ಚರಿಸಿದರು.
ಮಾಧ್ಯಮಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಆವರಗೆರೆ ರುದ್ರಮುನಿ, ಜನವರಿ ೨೦ರ ಒಳಗೆ ಸರಕಾರ ಈ ಬಗ್ಗೆ ಪ್ರತಿಕ್ರಿಯಿಸದಿದ್ದರೆ ಜ.೨೧ರಿಂದ ‘ನೂತನ ಸ್ವಾತಂತ್ರ ಸಂಗ್ರಾಮ’ಕ್ಕಾಗಿ ರೈತ ಹೋರಾಟ ಎಂಬ ಘೋಷಣೆಯೊಂದಿಗೆ ಚಳುವಳಿ ನಡೆಸಲಾಗುವುದು. ೨೧ಕ್ಕೆ ದೊಡ್ಡಬಾತಿ ಸುತ್ತಮುತ್ತಲ ಗ್ರಾಮಗಳ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲೆ ಜಾನುವಾರುಗಳು, ನೇಗಿಲು ಜೊತೆ ಪ್ರತಿಭಟನೆ ನಡೆಲಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಮಂಜುಳಾ ಕಂಠಿ, ಸುನಂದಾ ಸೇರಿದಂತೆ ದೊಡ್ಡಬಾತಿಯ ನೂರಾರು ರೈತರು ರಾಜ್ಯ ಸರಕಾರ, ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎ.ರಂದ್ರನಾಥ್ ಮತ್ತು ಕೆಐಎಡಿಬಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.