ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಪ್ರೇಮಿಗಳ ದಿನಾಚರಣೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಡಾ. ವಿ.ಎಸ್. ಆಚಾರ್ಯ ಸೂಚನೆ

ಬೆಂಗಳೂರು: ಪ್ರೇಮಿಗಳ ದಿನಾಚರಣೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಡಾ. ವಿ.ಎಸ್. ಆಚಾರ್ಯ ಸೂಚನೆ

Sat, 13 Feb 2010 03:13:00  Office Staff   S.O. News Service

ಬೆಂಗಳೂರು, ಫೆಬ್ರವರಿ ೧೨:ನಾಡಿದ್ದು ನಡೆಯಲಿರುವ ಪ್ರೇಮಿಗಳ ದಿನಾಚರಣೆಗೆ ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 

 

ನಗರದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪಹರೆ ಏರ್ಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

 

 

ಪ್ರೇಮಿಗಳ ದಿನಾಚರಣೆ ನಡೆಸುವುದು ನಮ್ಮ ಸಂಸ್ಕೃತಿಯಲ್ಲ. ಬೇರೆ ದೇಶದ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವುದು ಸರಿಯಲ್ಲ. ಆದರೂ ಆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದೇವೆ. ಅಂದು ಸೂಕ್ತ ಬಂದೋಬಸ್ತ್ ಮಾಡಲಾಗುತ್ತಿದೆ ಎಂದರು.

 

 

ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದು ಎಳೆದಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಕಾಂಗ್ರೆಸ್ ಮುಖಂಡರು ತಮ್ಮ ಕಾರ್ಯಕರ್ತರನ್ನು ನಿಯಂತ್ರಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

 

ಗೋ ಹತ್ಯೆ ನಿಷೇಧ: ಗೋಹತ್ಯೆ ನಿಷೇಧ ಮಾಡುತ್ತಿರುವ ಸರ್ಕಾರದ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ದೂರಿದರು.

 

ಕಾಂಗ್ರೆಸ್ ಮತ್ತು ಜೆಡಿ‌ಎಸ್ ಪಕ್ಷಗಳು ಗೋ ಹತ್ಯೆ ನಿಷೇಧ ಕಾನೂನನ್ನು ವಿರೋಧಿಸುತ್ತಿವೆ. ಇದು ಸರಿಯಲ್ಲ. ವಿರೋಧಿಸಲು ಹಸು, ಎತ್ತು, ಎಮ್ಮೆ ಅವರ ಪಕ್ಷದ ಚಿಹ್ನೆಯೇ?. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾನೂನು ಜಾರಿಮಾಡಿದರೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಈಗ ಅವರ ನಿಜವಾದ ಬಣ್ಣ ಬಯಲಾಗಿದೆ. ಕಟುಕರ ಪಾಲಾಗುವ ಹಸುಗಳನ್ನು ರಕ್ಷಿಸುವ ಕೆಲಸದಲ್ಲಿ ದೇವೇಗೌಡರು ಮಂಚೂಣಿ ಪಾತ್ರವಹಿಸಬೇಕೆಂದು ಹೇಳಿದರು.

 

 

ಬೆಂಗಳೂರು - ಮೈಸೂರು ಎಕ್ಸ್ ಪ್ರಸ್ ಹೆದ್ದಾರಿ ಯೋಜನೆಯನ್ನು ದೇವೇಗೌಡರು ವಿರೋಧಿಸಿ ಚಳವಳಿ ಮಾಡುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಯಿಸಿದ ಅವರು, ಇದರ ಹಿಂದೆ ಪಿತೂರಿ ಅಡಗಿದೆ. ಜನತಾದಳ ಸರ್ಕಾರದ ಅವಧಿಯಲ್ಲೇ ಈ ಯೋಜನೆಯ ಒಪ್ಪಂದವಾಯಿತು. ೧೯೯೭ ರಲ್ಲಿ ಪ್ರೇಮ್ ವರ್ಕ್ ಅಗ್ರಿಮಂಟ್ ಆಯಿತು. ಹೀಗಿರುವಾಗ ಪ್ರತಿಭಟನೆ ನಡೆಸುವುದಾದರೂ ಯಾಕೆ ಎಂದು ಪ್ರಶ್ನಿಸಿದರು. 

 


Share: